ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ | ಆರೋಪಿಯ ಕಸ್ಟಡಿ ಸಾವಿಗೆ ಐವರು ಪೊಲೀಸರು ಕಾರಣ: ನ್ಯಾಯಾಂಗ ತನಿಖೆ

PC : PTI
ಮುಂಬೈ: ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್ ಶಿಂಧೆಯ ಕಸ್ಟಡಿ ಸಾವಿಗೆ ಐವರು ಪೊಲೀಸರು ಕಾರಣ ಎಂದು ಮ್ಯಾಜಿಸ್ಟ್ರೇಟ್ ತನಿಖೆ ಹೇಳಿದೆ.
ಪೊಲೀಸರು ತನ್ನ ಪುತ್ರನನ್ನು ನಕಲಿ ಎನ್ಕೌಂಟರ್ನಲ್ಲಿ ಹತ್ಯೆಗೈದಿದ್ದಾರೆ ಎಂದು ಪ್ರತಿಪಾದಿಸಿ ಆಕಾಶ್ ಶಿಂಧೆಯ ತಂದೆ ಅಣ್ಣಾ ಶಿಂಧೆ ಸಲ್ಲಿಸಿದ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ವಿಚಾರಣೆ ನಡೆಸಿತು. ಈ ಸಂದರ್ಭ ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತು.
ಅಕ್ಷಯ್ ಶಿಂಧೆಯ ಕಸ್ಟಡಿ ಸಾವಿನ ಆರೋಪಕ್ಕೆ ಒಳಗಾದವರಲ್ಲಿ ಠಾಣೆ ಕ್ರೈಮ್ ಬ್ರಾಂಚ್ನ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಸಂಜಯ್ ಶಿಂಧೆ, ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ನೀಲೇಶ್ ಮೋರೆ, ಹೆಡ್ ಕಾನ್ಸ್ಟೇಬಲ್ಗಳಾದ ಅಭಿಜಿತ್ ಮೋರೆ, ಬರೀಶ್ ತಾವ್ಡೆ ಹಾಗೂ ಪೊಲೀಸ್ ಚಾಲಕ ಸೇರಿದ್ದಾರೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಹಾಗೂ ನೀಲಾ ಗೋಖಲೆ ಅವರ ವಿಭಾಗೀಯ ಪೀಠ, ತನಿಖಾ ವರದಿಯ ಆಧಾರದ ಮೆಲೆ ಪ್ರಕರಣ ದಾಖಲಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತು. ಅಲ್ಲದೆ, ಪ್ರಕರಣದ ತನಿಖೆ ನಡೆಸಲಿರುವ ತನಿಖಾ ಸಂಸ್ಥೆಯ ವಿವರವನ್ನು ಕೋರಿತು.
ಮ್ಯಾಜಿಸ್ಟ್ರೇಟ್ ತನಿಖೆ ನಡೆಸಿದ್ದಾರೆ ಹಾಗೂ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ಮ್ಯಾಜಿಸ್ಟ್ರೇಟ್ ಆರೋಪಿ ಅಕ್ಷಯ್ ಶಿಂಧೆಯ ಸಾವಿಗೆ ಐವರು ಪೊಲೀಸರು ಕಾರಣ ಎಂದು ಮುಕ್ತಾಯಗೊಳಿಸಿದ್ದಾರೆ ಎಂದು ಪೀಠವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಈ ಮ್ಯಾಜಿಸ್ಟ್ರೇಟ್ ವರದಿಯ ಆಧಾರದಲ್ಲಿ ಎಫ್ಐಆರ್ ದಾಖಲಿಸಲು ನೀವು (ಸರಕಾರ) ಬದ್ಧರಾಗಿದ್ದೀರಿ. ಈ ಪ್ರಕರಣವನ್ನು ಯಾವ ಸಂಸ್ಥೆ ತನಿಖೆ ನಡೆಸುತ್ತದೆ ಎಂದು ನಮಗೆ ತಿಳಿಸಿ. ಅದರೊಂದಿಗೆ ಜೋಡಿಸಲಾದ ಮೂಲ ವರದಿ, ಎಲ್ಲಾ ದಾಖಲೆಗಳು ಹಾಗೂ ಸಾಕ್ಷಿಗಳ ಹೇಳಿಕೆ ಸದ್ಯ ನಮ್ಮಲ್ಲೇ ಇರಲಿ. ಪ್ರಕರಣದ ಕುರಿತು ವಿಚಾರಣೆ ನಡೆಸುವಾಗ ಪ್ರಾಸಿಕ್ಯೂಷನ್ಗೆ ಅನಂತರ ಬೇಕಾಗಬಹುದು ಎಂದು ಅದು ಹೇಳಿತು.
ಪ್ರಕರಣದ ಕುರಿತು ತನಿಖೆ ನಡೆಸಲಿರುವ ತನಿಖಾ ಸಂಸ್ಥೆಯ ಕುರಿತ ವಿವರಗಳನ್ನು ಎರಡು ವಾರಗಳ ಒಳಗೆ ಪೀಠಕ್ಕೆ ನೀಡುವಂತೆ ರಾಜ್ಯ ಸರಕಾರಕ್ಕೆ ನ್ಯಾಯಾಲಯ ಸೂಚಿಸಿತು.
ಬದ್ಲಾಪುರ ಶಾಲೆಯ ಶೌಚಾಲಯದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕಿಕ ಕಿರುಕುಳ ನೀಡಿದ ಆರೋಪದಲ್ಲಿ 2024 ಆಗಸ್ಟ್ನಲ್ಲಿ ಶಾಲೆಯ ಸಹಾಯಕ ಅಕ್ಷಯ್ ಶಿಂಧೆ (24)ಯನ್ನು ಬಂಧಿಸಲಾಗಿತ್ತು. ಕಳೆದ ವರ್ಷ ಸೆಪ್ಪಂಬರ್ 23ರಂದು ವಿಚಾರಣೆಗಾಗಿ ತಲೋಜಾ ಕಾರಾಗೃಹಕ್ಕೆ ಕರೆದೊಯ್ಯುತ್ತಿರುವಾಗ ಪೊಲೀಸರ ಎನ್ಕೌಂಟರ್ನಲ್ಲಿ ಅಕ್ಷಯ್ ಶಿಂಧೆ ಸಾವನ್ನಪ್ಪಿದ್ದ.