“ದೋಷಪೂರಿತ ದುರಸ್ತಿ, ಸಿಗ್ನಲಿಂಗ್ ದೋಷದಿಂದ ಬಾಲಾಸೋರ್ ರೈಲು ದುರಂತ”: ರೈಲ್ವೆ ಸುರಕ್ಷತಾ ಆಯುಕ್ತರ ವರದಿಯಲ್ಲಿ ಬಹಿರಂಗ

Photo: PTI
ಹೊಸದಿಲ್ಲಿ: ಎರಡು ದೋಷಪೂರಿತ ದುರಸ್ತಿ ಕಾರ್ಯಾಚರಣೆಗಳಿಂದ ಉಂಟಾದ ಸಿಗ್ನಲಿಂಗ್ ದೋಷವು 293 ಜೀವಗಳನ್ನು ಬಲಿಪಡೆದ ಒಡಿಶಾದ ಬಾಲಸೋರ್ ರೈಲ ದುರಂತಕ್ಕೆ ಕಾರಣವಾಯಿತು ಎಂದು ರೈಲ್ವೆ ಸುರಕ್ಷತಾ ಆಯುಕ್ತರು ನಡೆಸಿದ ತನಿಖೆಯಿಂದ ಬಹಿರಂಗಗೊಂಡಿದೆ.
ಮೊದಲ ದುರಸ್ತಿ ಕೆಲಸವನ್ನು 2018ರಲ್ಲಿ ನಡೆಸಲಾಗಿದ್ದರೆ ಎರಡನೇ ದುರಸ್ತಿಯನ್ನು ಅಪಘಾತ ನಡೆಯುವುದಕ್ಕಿಂತ ಕೆಲವೇ ಗಂಟೆಗಳಿಗೆ ಮುನ್ನ ನಡೆಸಲಾಗಿತ್ತು.
ಲೊಕೇಶನ್ ಪೆಟ್ಟಿಗೆಯೊಳಗಿನ ತಂತಿಗಳನ್ನು ತಪ್ಪಾಗಿ ಲೇಬಲ್ ಮಾಡಲಾಗಿತ್ತು ಹಾಗೂ ವರ್ಷಗಳ ಕಾಲ ಈ ದೋಷ ಯಾರ ಗಮನಕ್ಕೂ ಬಂದಿರಲಿಲ್ಲ, ದುರಸ್ತಿ ವೇಳೆ ಇದು ಮತ್ತಷ್ಟು ದೋಷಗಳಿಗೆ ಕಾರಣವಾಯಿತು ಎಂದು ಕಳೆದ ವಾರ ರೈಲ್ವೆ ಮಂಡಳಿಗೆ ರೈಲ್ವೆ ಸುರಕ್ಷತಾ ಆಯುಕ್ತರು ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ.
ನಿರ್ವಹಣಾ ಕಾಮಗಾರಿಯ ನಂತರ ವೈರಿಂಗ್ ಅನ್ನು ಹೇಗೆ ಮರು ಕನೆಕ್ಟ್ ಮಾಡಬೇಕೆಂದು ತಂತ್ರಜ್ಞರಿಗೆ ಮಾರ್ಗದರ್ಶನ ನೀಡುವ ವೈರಿಂಗ್ ರೇಖಾಚಿತ್ರವನ್ನು 2015ರಲ್ಲಿಯೇ ಅನುಮೋದಿಸಲಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತಂದಿರಲಿಲ್ಲ ಎಂದು ತನಿಖೆಯಿಂದ ಕಂಡುಕೊಳ್ಳಲಾಗಿದೆ.
ಸಿಗ್ನಲ್ಗಳು ಹೊಂದಿಸಿದ ಮಾರ್ಗ ಮತ್ತು ರೈಲು ನಿಜವಾಗಿ ಸಾಗಿದ ಮಾರ್ಗದಲ್ಲಿ ಹೊಂದಾಣಿಕೆ ತಪ್ಪಿದ ಘಟನೆ ಮೇ 15ರಂದು ಖರಗ್ಪುರ್ ವಿಭಾಗದ ಬಂಕ್ರನಯಾಬಾಝ್ ನಿಲ್ದಾಣದಲ್ಲಿ ನಡೆದಿತ್ತು ಇದು ತಪ್ಪಾದ ವೈರಿಂಗ್ ಮತ್ತು ಕೇಬಲ್ ದೋಷದಿಂದಾಗಿದೆ ಎಂದು ವರದಿ ಹೇಳಿದೆ.
“ಈ ಘಟನೆಯ ನಂತರ ಸೂಕ್ತ ಪರಿಹಾರ ಕ್ರಮಕೈಗೊಂಡಿದ್ದರೆ ಜೂನ್ 2ರ ಅಪಘಾತ ನಡೆಯುತ್ತಿರಲಿಲ್ಲ, ರೈಲುಗಳ ಕಾರ್ಯಾಚರಣೆಗೆ ಸಿಗ್ನಲ್ಗಳನ್ನು ನಿಯಂತ್ರಿಸುವ ಸ್ಟೇಷನ್ ಮಾಸ್ಟರ್ ಅವರು ಸಿಗ್ನಲಿಂಗ್ ಕಂಟ್ರೋಲ್ ಸಿಸ್ಟಂ ಸರಿಯಾಗಿಲ್ಲ ಎಂದು ಗುರುತಿಸಲು ವಿಫಲರಾಗಿದ್ದರು,” ಎಂದು ವರದಿ ಹೇಳಿದೆ.







