`ಬಲೂಚಿಸ್ತಾನ ಸ್ವಾತಂತ್ರ್ಯ ಚಳವಳಿ' ಬೆಂಬಲಿಸಲು ಪ್ರಧಾನಿ ಮೋದಿಗೆ ಬಲೂಚ್ ನಾಯಕರ ಒತ್ತಾಯ; ಸಿಂಧೂ ಒಪ್ಪಂದ ಅಮಾನತು ಕ್ರಮಕ್ಕೆ ಶ್ಲಾಘನೆ

ನರೇಂದ್ರ ಮೋದಿ | PC : PTI
ಕ್ವೆಟ್ಟಾ: ಬಲೂಚಿಸ್ತಾನ ಸ್ವಾತಂತ್ರ್ಯ ಚಳವಳಿಗೆ ವ್ಯಾಪಕ ಬೆಂಬಲ ನೀಡಬೇಕೆಂದು `ಬಲೂಚ್ ಅಮೆರಿಕನ್ ಕಾಂಗ್ರೆಸ್' ಅಧ್ಯಕ್ಷ ತಾರಾ ಚಂದ್ ಪ್ರಧಾನಿ ನರೇಂದ್ರ ಮೋದಿಯನ್ನು ಶನಿವಾರ ಒತ್ತಾಯಿಸಿದ್ದಾರೆ.
`ಬಲೂಚಿಸ್ತಾನ ಸ್ವಾತಂತ್ರ್ಯಕ್ಕೆ ಅರ್ಥಪೂರ್ಣ ಬೆಂಬಲ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ. ಪಾಕಿಸ್ತಾನದ ಆಡಳಿತದಡಿ ಬಲೂಚ್ ಜನತೆ ದಬ್ಬಾಳಿಕೆ ಮತ್ತು ನರಮೇಧವನ್ನು ಎದುರಿಸುತ್ತಿದ್ದಾರೆ. ಸ್ವತಂತ್ರ ಬಲೂಚಿಸ್ತಾನವು ಶಾಂತಿಯನ್ನು ಪ್ರೀತಿಸುವ ಭಾರತಕ್ಕೆ ವರದಾನವಾಗಲಿದೆ. ನ್ಯಾಯಕ್ಕಾಗಿ ನಮ್ಮೊಂದಿಗೆ ನಿಲ್ಲಿ' ಎಂದು ತಾರಾ ಚಂದ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ದಶಕಗಳಿಂದಲೂ ಪಾಕಿಸ್ತಾನವು ಬಲೂಚ್ ಜನರ ವಿರುದ್ಧ ಬಲವಂತದ ಕಣ್ಮರೆ, ಚಿತ್ರಹಿಂಸೆ ಮತ್ತು ನರಮೇಧ ಸೇರಿದಂತೆ ದೌರ್ಜನ್ಯ ನಡೆಸುತ್ತಿದೆ ಎಂದು ಅವರು ಪತ್ರದಲ್ಲಿ ಆರೋಪಿಸಿದ್ದು ಪತ್ರವನ್ನು ಬಲೂಚ್ ಅಮೆರಿಕನ್ ಕಾಂಗ್ರೆಸ್ ನ ಪರವಾಗಿ ದಿಲ್ಲಿಯಲ್ಲಿರುವ ಪ್ರಧಾನ ಮಂತ್ರಿಯವರ ಕಚೇರಿಯ ವಿಳಾಸಕ್ಕೆ ರವಾನಿಸಲಾಗಿದೆ.
ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಬಲೂಚಿಸ್ತಾನ ವಿಷಯಕ್ಕೆ ನೈತಿಕ ಬೆಂಬಲ ಘೋಷಿಸಿರುವುದು ಜನರಲ್ಲಿ ಭರವಸೆಯನ್ನು ಮೂಡಿಸಿದೆ. ಪಾಕಿಸ್ತಾನದ ಪ್ರಬಲ ಮಿಲಿಟರಿಯ ಬೆಂಬಲ ಪಡೆದಿರುವ `ಜಿಹಾದಿ ಸೇನೆ' ನಡೆಸಿದ ನರಮೇಧದ ರೀತಿಯ ಕೃತ್ಯಗಳಿಂದ ಬಲೂಚಿಸ್ತಾನದ ಜನತೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇಂತಹ ಸೇನೆಯ ನಿಯಂತ್ರಣದಲ್ಲಿರುವ ಆಡಳಿತದಡಿ ಪಾಕಿಸ್ತಾನವು ನನ್ನ ಸಾವಿರಾರು ದೇಶವಾಸಿಗಳ ಬಲವಂತದ ಕಣ್ಮರೆ, ಚಿತ್ರಹಿಂಸೆ ಮತ್ತು ಸಾವಿಗೆ ಹೊಣೆಗಾರನಾಗಿರುತ್ತದೆ. ಇಂತಹ ಕ್ರಮಗಳು ಹಲವು ದಶಕಗಳಿಂದ ಮುಂದುವರಿದಿರುವ ಬಲೂಚ್ ರಾಷ್ಟ್ರೀಯ ವಿಮೋಚನಾ ಚಳವಳಿಯನ್ನು ಹತ್ತಿಕ್ಕುವ ವ್ಯಾಪಕ ಅಭಿಯಾನದ ಒಂದು ಭಾಗವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಸಾಹತುಶಾಹಿ ಶಕ್ತಿಯಾಗಿ ಬಲೂಚಿಸ್ತಾನದಲ್ಲಿ ಚೀನಾದ ಪಾಲ್ಗೊಳ್ಳುವಿಕೆ ಹೆಚ್ಚುವರಿ ಭೌಗೋಳಿಕ ರಾಜಕೀಯ ಅಪಾಯವನ್ನುಂಟು ಮಾಡುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದು ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಜಾಗತಿಕ ವೇದಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಭಾರತವನ್ನು ಕೋರಿದ್ದಾರೆ.
► ಸಿಂಧೂ ಒಪ್ಪಂದ ಅಮಾನತು ನಿರ್ಧಾರಕ್ಕೆ ಶ್ಲಾಘನೆ
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸುವ ಪ್ರಧಾನಿ ಮೋದಿಯ ನಿರ್ಧಾರವು ಪಾಕಿಸ್ತಾನಕ್ಕೆ ಪ್ರಬಲ ಸಂದೇಶವನ್ನು ನೀಡುವ ಧೈರ್ಯಶಾಲಿ ನಡೆಯಾಗಿದೆ. ಈ ಮೂಲಕ `ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ' ಎಂಬ ಸ್ಪಷ್ಟ ಸಂದೇಶವನ್ನು ಪಾಕ್ ಸೇನೆಗೆ ನೀಡಲಾಗಿದೆ ಎಂದು ಪತ್ರದಲ್ಲಿ ಶ್ಲಾಘಿಸಲಾಗಿದೆ.
ಬಲೂಚ್ ಅಮೆರಿಕನ್ ಕಾಂಗ್ರೆಸ್ (ಬಿಎಸಿ) ನೋಂದಾಯಿತ ರಾಜಕೀಯ ಘಟಕವಾಗಿದ್ದು ಇದು ಸ್ವಯಂ ನಿರ್ಣಯದ ಹಕ್ಕಿಗಾಗಿ ಬಲೂಚ್ ರಾಷ್ಟ್ರೀಯ ಹೋರಾಟವನ್ನು ಪ್ರತಿಪಾದಿಸುವ, ಮತ್ತು ಅಮೆರಿಕದಲ್ಲಿ ಬಲೂಚ್ ವಲಸೆಗಾರರ ಸಾಮಾಜಿಕ-ಸಾಂಸ್ಕೃತಿಕ ಮತ್ತು ರಾಜಕೀಯ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.







