ಅಸ್ಸಾಂ | ಮುಸ್ಲಿಂ ಮಹಿಳೆಯನ್ನು ಬಾಂಗ್ಲಾದೇಶಕ್ಕೆ ಗಡಿಪಾರು; ಆಕೆಯ ಬರುವಿಕೆಗಾಗಿ ಕಾಯುತ್ತಲೇ ಇರುವ ಕುಟುಂಬ

PC : deccanherald.com
ಗುವಾಹಟಿ: ಮೇ 25ರಂದು ಅಸ್ಸಾಂನ ನಲ್ಬಾರಿ ಪೊಲೀಸ್ ಠಾಣೆಯ ಪೊಲೀಸ್ ಪೇದೆಯೊಬ್ಬರು ತಮ್ಮ ಮನೆಗೆ ಬಂದಾಗ, ಕೋವಿಡ್ ಸಾಂಕ್ರಾಮಿಕದ ವೇಳೆ ವಿದೇಶಿಗರ ಬಂದೀಖಾನೆಯಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡ ನಂತರ, ವಾರಕ್ಕೊಮ್ಮೆ ಪೊಲೀಸರು ನೀಡುವ ನಿಯಮಿತ ಭೇಟಿ ಅದೆಂದೇ 68 ವರ್ಷದ ಸಕೀನಾ ಭಾವಿಸಿದ್ದರು.
ಆದರೆ, ದಿಗ್ಭ್ರಮೆಯಾಗುವಂತೆ ಐದು ಮಕ್ಕಳ ತಾಯಿಯಾದ ಸಕೀನಾರನ್ನು ಮತ್ತೆ ಮನೆಗೆ ಮರಳಲು ಆ ಪೊಲೀಸ್ ಪೇದೆ ಅವಕಾಶ ನೀಡಿರಲಿಲ್ಲ ಹಾಗೂ ಆಕೆಯನ್ನು ಬಾಂಗ್ಲಾದೇಶದ ಗಡಿ ಜಿಲ್ಲೆಯಾದ ಧುಬ್ರಿಯಿಂದ 150 ಕಿಮೀ ದೂರ ಇರುವ ಬಿಎಸ್ಎಫ್ ಶಿಬಿರಕ್ಕೆ ಕರೆದೊಯ್ದಿದ್ದರು.
ಗೃಹ ವ್ಯವಹಾರಗಳ ಸಚಿವಾಲಯದ ಆದೇಶದಂತೆ ಆಕೆಯೊಂದಿಗೆ ಇನ್ನೂ ಕೆಲವರನ್ನು ಗಡಿಗೆ ಕರೆದೊಯ್ದು, ಬಾಂಗ್ಲಾದೇಶದೊಳಕ್ಕೆ ಕಳಿಸಲಾಗಿತ್ತು. ಆದರೆ, ಅಸ್ಸಾಮಿನ ಬರ್ಕೂರ ಗ್ರಾಮದ ಅಸ್ಸಾಮಿ ಮುಸ್ಲಿಂ ಆದ ಸಕೀನಾ, ಗರಿಯಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 2022ರಲ್ಲಿ ಬಿಜೆಪಿ ನೇತೃತ್ವದ ಸರಕಾರ ಗುರುತಿಸಿರುವ ಮೂಲನಿವಾಸಿ ಮುಸ್ಲಿಂ ಸಮುದಾಯಗಳ ಪೈಕಿ ಗರಿಯಾ ಸಮುದಾಯ ಕೂಡಾ ಒಂದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಕೀನಾರ ಪುತ್ರಿ “ನನ್ನ ತಾಯಿ ಮಿಯಾ ಮುಸ್ಲಿಂ ಅಲ್ಲ” ಎಂದು ಅಳಲು ತೋಡಿಕೊಳ್ಳುತ್ತಾರೆ. ಅಸ್ಸಾಂನಲ್ಲಿ ವಾಸಿಸುತ್ತಿರುವ ಬಂಗಾಳಿ ಭಾಷಿಕ ಮುಸ್ಲಿಮರನ್ನು ಗುರುತಿಸಲು ಬಳಸುವ ಅವಹೇಳನಕಾರಿ ಪದ ‘ಮಿಯಾ’ ಆಗಿದೆ. ಈ ಮುಸ್ಲಿಮರನ್ನು ನುಸುಳುಕೋರರು ಎಂದು ಆರೋಪಿಸುತ್ತಿರುವ ಬಿಜೆಪಿ, ಅವರು ಮೂಲನಿವಾಸಿ ಮುಸ್ಲಿಂ ಜನರ ಅಸ್ಮಿತೆಗೆ ಅಪಾಯ ಎಂದು ಪ್ರತಿಪಾದಿಸುತ್ತಿದೆ.
ಆದರೆ, ಮೂರು ವರ್ಷಗಳ ಹಿಂದೆ ಮೃತಪಟ್ಟ ಸಕೀನಾರ ಪತಿ ಖಲೀಲ್ ಅಲಿ ಬಂಗಾಳಿ ಭಾಷಿಕ ಮುಸ್ಲಿಮರಾಗಿದ್ದಾರೆ. ಆದರೆ, ಅವರ ವಿರುದ್ಧ ಯಾವುದೇ ಪ್ರಕರಣಗಳಿರಲಿಲ್ಲ ಎಂದು ರಶಿಯಾ ಅಲವತ್ತುಕೊಳ್ಳುತ್ತಾರೆ.
ಅಕ್ಟೋಬರ್ 2012ರಲ್ಲಿ ಸಕೀನಾರನ್ನು ವಿದೇಶಿ ಪ್ರಜೆ ಎಂದು ನಲ್ಬರಿಯ ವಿದೇಶೀಯರ ನ್ಯಾಯಮಂಡಳಿ ಘೋಷಿಸಿತ್ತು. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಕೀನಾರನ್ನು ಬಿಡುಗಡೆಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶದಂತೆ ಜಾಮೀನಿನ ಮೇಲೆ ಬಿಡುಗಡೆಯಾಗುವವರೆಗೂ ಸಕೀನಾ ಕೋಕ್ರಝಾರ್ ನ ಕಾರಾಗೃಹದಲ್ಲೇ ಇದ್ದರು.
ಜುಲೈ ತಿಂಗಳಲ್ಲಿ ಗುವಾಹಟಿ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದ್ದ ಅಸ್ಸಾಂ ಗೃಹ ಇಲಾಖೆ, ಸಕೀನಾರನ್ನು 1971ರ ನಂತರದ ವಲಸಿಗಳು ಎಂದು ನಲ್ಬರಿ ವಿದೇಶೀಯರ ನ್ಯಾಯಮಂಡಳಿ ಅಕ್ಟೋಬರ್ 1, 2012ರಂದು ಘೋಷಿಸಿದೆ ಎಂದು ತಿಳಿಸಿತ್ತು. ವಿದೇಶೀಯರ ನ್ಯಾಯಮಂಡಳಿಯ ತೀರ್ಪನ್ನು ಪ್ರಶ್ನಿಸಿ ಸಕೀನಾ ಸಲ್ಲಿಸಿದ್ದ ಮೇಲ್ಮನವಿಯನ್ನು ಗುವಾಹಟಿ ಹೈಕೋರ್ಟ್ ವಜಾಗೊಳಿಸಿತ್ತು. ವಿದೇಶೀಯರ ನ್ಯಾಯಮಂಡಳಿ ವಿದೇಶೀಯರು ಎಂದು ಘೋಷಿಸಿರುವ ಏಳು ಮಂದಿಯ ಪೈಕಿ ಸಕೀನಾ ಕೂಡಾ ಒಬ್ಬರಾಗಿದ್ದು, ಅವರನ್ನು ಮೇ 26ರಂದು ಧುಬ್ರಿಯಲ್ಲಿನ ಪನ್ಬರಿಯಲ್ಲಿರುವ ಬಿಎಸ್ಎಫ್ ಸಿಬ್ಬಂದಿಗಳ ವಶಕ್ಕೆ ಒಪ್ಪಿಸಲಾಗಿತ್ತು ಎಂದು ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ.
ಅಸ್ಸಾಂನಲ್ಲಿನ ವಿದೇಶೀಯರನ್ನು ಪತ್ತೆ ಹಚ್ಚಲು ಹಾಗೂ ಗಡೀಪಾರು ಮಾಡಲು ಮಾರ್ಚ್ 24, 1971 ಅಂತಿಮ ಗಡುವಾಗಿತ್ತು. ಆರು ವರ್ಷಗಳ ಸುದೀರ್ಘ ಅಸ್ಸಾಂ ಚಳವಳಿಯ ನಂತರ 1985 ಅಸ್ಸಾಂ ಒಡಂಬಡಿಕೆಯಲ್ಲಿ ಈ ಗಡುವನ್ನು ನಿರ್ಧರಿಸಲಾಗಿತ್ತು.
“ನಮ್ಮ ತಾಯಿ ಮನೆಗೆ ಮರಳದೆ ಇದ್ದುದರಿಂದ, ನಾವು ಪೊಲೀಸ್ ಠಾಣೆಗೆ ತೆರಳಿದ್ದೆವು ಹಾಗೂ ನಂತರ ಗೋಲಾಪಾರದಲ್ಲಿನ ಕಾರಾಗೃಹಕ್ಕೂ ಹೋಗಿದ್ದೆವು. ಆದರೆ, ಪೊಲೀಸರು ನಮಗೆ ನೆರವು ನೀಡಲಿಲ್ಲ” ಎಂದು ಸಕೀನಾರ ಪುತ್ರಿ ರಶಿಯಾ ಅಳಲು ತೋಡಿಕೊಂಡಿದ್ದಾರೆ.
“ನಮಗೆ ಆಕೆಯ ಇರುವಿಕೆಯ ಬಗ್ಗೆ ಯಾವುದೇ ಸುಳಿವಿಲ್ಲ. ಆದರೆ, ಕೆಲದಿನಗಳ ಹಿಂದೆ ಆಕೆ ಬಾಂಗ್ಲಾದೇಶದ ಢಾಕಾದಲ್ಲಿದ್ದಾರೆ ಎಂದು ಸುದ್ದಿಗಳಲ್ಲಿ ನೋಡಿದೆವು. ಅಲ್ಲಿನ ಕುಟುಂಬವೊಂದು ಆಕೆಗೆ ಆಶ್ರಯ ಒದಗಿಸಿದೆ. ಇದೀಗ ಆಕೆಯ ಮರಳುವಿಕೆಗಾಗಿ ನಾವು ಯಾರನ್ನು ಭೇಟಿಯಾಗಬೇಕು ಎಂದು ನಮಗೆ ತಿಳಿದಿಲ್ಲ. ಏನಾದರೂ ಸಹಾಯ ಮಾಡಿ” ಎಂದು ಅವರು ಮೊರೆ ಇಟ್ಟಿದ್ದಾರೆ.
ಸೌಜನ್ಯ: deccanherald.com







