ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡಲು ಎಸ್ಟಿಎಫ್ ಗಳ ರಚನೆಗೆ ರಾಜ್ಯಗಳಿಗೆ ಎಂಎಚ್ಎ ನಿರ್ದೇಶನ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಮುಂದಿನ 30 ದಿನಗಳಲ್ಲಿ ಅಕ್ರಮ ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ವಲಸಿಗರನ್ನು ಗುರುತಿಸಿ ಗಡಿಪಾರು ಮಾಡಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆ(ಎಸ್ಟಿಎಫ್) ಗಳನ್ನು ರಚಿಸುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ)ವು ಎಲ್ಲ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ಎ.22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಹೊರಡಿಸಲಾಗಿರುವ ಈ ನಿರ್ದೇಶನವು ಕೇಂದ್ರೀಯ ಏಜೆನ್ಸಿಗಳ ಸಮನ್ವಯದೊಂದಿಗೆ ಕಾರ್ಯಾಚರಣೆಯನ್ನು ಕೈಗೊಳ್ಳಲು ರಾಜ್ಯ ಸರಕಾರಗಳಿಗೆ ಸ್ವಾತಂತ್ರ್ಯವನ್ನು ನೀಡಿದೆ.
ಗೃಹ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಿರುವ ಪತ್ರದ ಪ್ರಕಾರ ಎಸ್ಟಿಎಫ್ಗಳು ಶಂಕಿತ ಅಕ್ರಮ ವಲಸಿಗರ ಹೆಸರು,ಹೆತ್ತವರ ಹೆಸರು,ವಾಸಸ್ಥಳ ವಿಳಾಸ ಮತ್ತು ನಿಕಟ ಸಂಬಂಧಿಗಳ ಕುರಿತು ಮಾಹಿತಿ ಸೇರಿದಂತೆ ಸಮಗ್ರ ವಿವರಗಳನ್ನು ಸಂಗ್ರಹಿಸಬೇಕಾಗುತ್ತದೆ. ಭೌತಿಕ ಪರಿಶೀಲನೆಯ ಬಳಿಕ ಗುರುತಿಸಲಾದ ವ್ಯಕ್ತಿಗಳನ್ನು ನಿಯೋಜಿತ ತಾತ್ಕಾಲಿಕ ಬಂಧನ ಕೇಂದ್ರಗಳಿಗೆ ರವಾನಿಸಲಾಗುತ್ತದೆ.
ಅವರು ಅಕ್ರಮ ವಲಸಿಗರು ಎನ್ನುವುದು ದೃಢಪಟ್ಟ ಬಳಿಕ ಅವರ ಬಯೊಮೆಟ್ರಿಕ್ ಮತ್ತು ಜನಸಂಖ್ಯಾ ವಿವರಗಳನ್ನು ದಾಖಲಿಸಿಕೊಂಡು ವಿದೇಶಿಯರ ಗುರುತಿನ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುವಂತೆ ಎಂಎಚ್ಎ ಸೂಚಿಸಿದೆ.
ಪರಿಶೀಲನೆ ಪ್ರಕ್ರಿಯೆ 30 ದಿನಗಳಲ್ಲಿ ಪೂರ್ಣಗೊಳ್ಳಬೇಕಿದ್ದು,ಬಳಿಕ ವಲಸಿಗರನ್ನು ಬಿಎಸ್ಎಫ್,ಅಸ್ಸಾಂ ರೈಫಲ್ಸ್ ಅಥವಾ ಭಾರತೀಯ ತಟ ರಕ್ಷಣಾ ಪಡೆಗೆ ಹಸ್ತಾಂತರಿಸಲಾಗುವುದು. ಈ ಪಡೆಗಳು ವಲಸಿಗರನ್ನು ಅವರ ಮೂಲದೇಶದ ಅಧಿಕಾರಿಗಳಿಗೆ ಹಸ್ತಾಂತರಿಸುವ ಮೂಲಕ ಅವರ ಗಡಿಪಾರು ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತವೆ.
ಭಾರತೀಯ ಪೌರತ್ವದ ಯಾವುದೇ ಪ್ರತಿಪಾದನೆಯನ್ನು ಒಂದು ತಿಂಗಳೊಳಗೆ ಪರಿಶೀಲಿಸಬೇಕು ಎಂದೂ ಎಂಎಚ್ಎ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಭದ್ರತೆ ಕುರಿತು ಹೆಚ್ಚುತ್ತಿರುವ ಕಳವಳಗಳು ಮತ್ತು ಇತ್ತೀಚಿನ ಭಯೋತ್ಪಾದಕ ಚಟುವಟಿಕೆಗಳಲ್ಲಿ ವಿದೇಶಿ ಶಕ್ತಿಗಳ ಪಾತ್ರದ ಆರೋಪದ ನಡುವೆ ಕೇಂದ್ರವು ಈ ಕಠಿಣ ನಿಲುವನ್ನು ತಳೆದಿದೆ.