ನ.1ರಿಂದ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗಳಲ್ಲಿ ನಾಲ್ವರು ನಾಮಿನಿಗಳನ್ನು ಸೇರಿಸಬಹುದು

ಸಾಂದರ್ಭಿಕ ಚಿತ್ರ | Photo Credit : freepik.com
ಹೊಸದಿಲ್ಲಿ,ಅ.23: ಕ್ಲೇಮ್ಗಳು ಅಥವಾ ಹಕ್ಕು ಕೋರಿಕೆಗಳ ಇತ್ಯರ್ಥದಲ್ಲಿ ಏಕರೂಪತೆ ಮತ್ತು ದಕ್ಷತೆಯನ್ನು ತರಲು ಬ್ಯಾಂಕಿಂಗ್ ವ್ಯವಸ್ಥೆಯು ಮುಂದಾಗಿದ್ದು,ನ.1ರಿಂದ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗಳಲ್ಲಿ ನಾಲ್ವರು ನಾಮಿನಿಗಳನ್ನು ನಿಯೋಜಿಸಬಹುದು.
ಬ್ಯಾಂಕಿಂಗ್ ಕಾನೂನುಗಳ(ತಿದ್ದುಪಡಿ) ಕಾಯ್ದೆ,2025ರಡಿ ನಾಮನಿರ್ದೇಶನಕ್ಕೆ ಸಂಬಂಧಿಸಿದ ಪ್ರಮುಖ ನಿಬಂಧನೆಗಳು ನ.1,2025ರಿಂದ ಜಾರಿಗೆ ಬರಲಿವೆ ಎಂದು ವಿತ್ತ ಸಚಿವಾಲಯವು ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
ಬ್ಯಾಂಕಿಂಗ್ ಕಾನೂನುಗಳ(ತಿದ್ದುಪಡಿ) ಕಾಯ್ದೆ,2025ನ್ನು ಎ.15, 2025ರಂದು ಅಧಿಸೂಚಿಸಲಾಗಿತ್ತು. ಇದು ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ 1934, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ 1955 ಹಾಗೂ ಬ್ಯಾಂಕಿಂಗ್ ಕಂಪನಿಗಳು (ಸ್ವಾಧೀನ ಮತ್ತು ಬದ್ಧತೆಗಳ ವರ್ಗಾವಣೆ) ಕಾಯ್ದೆ 1970 ಮತ್ತು 1980 ಈ ಐದು ಶಾಸನಗಳಿಗೆ ಒಟ್ಟು 19 ತಿದ್ದುಪಡಿಗಳನ್ನು ಒಳಗೊಂಡಿದೆ.
ನಾಮ ನಿರ್ದೇಶನಕ್ಕೆ ಸಂಬಂಧಿಸಿದ ಪ್ರಮುಖ ತಿದ್ದುಪಡಿಗಳು:
►ಬಹು ನಾಮ ನಿರ್ದೇಶನ: ಗ್ರಾಹಕರು ತಮ್ಮ ಖಾತೆಯಲ್ಲಿರುವ ಹಣಕ್ಕಾಗಿ ತಮ್ಮ ಆದ್ಯತೆಯ ಮೇರೆಗೆ ಏಕಕಾಲದಲ್ಲಿ ಅಥವಾ ಒಬ್ಬರ ನಂತರ ಒಬ್ಬರಂತೆ ನಾಲ್ಕು ಜನರನ್ನು ನಾಮನಿರ್ದೇಶನ ಮಾಡಬಹುದು. ಇದು ಠೇವಣಿದಾರರಿಗೆ ಮತ್ತು ಅವರ ನಾಮಿನಿಗಳಿಗೆ ಕ್ಲೇಮ್ ಇತ್ಯರ್ಥಗಳನ್ನು ಸರಳಗೊಳಿಸುತ್ತದೆ.
►ಸುರಕ್ಷತಾ ಲಾಕರ್ಗಳಿಗೆ ನಾಮ ನಿರ್ದೇಶನ: ಸೇಫ್ಟಿ ಲಾಕರ್ಗಳಿಗೆ ಒಬ್ಬರ ನಂತರ ಇನ್ನೊಬ್ಬರಂತೆ ಮಾತ್ರ ನಾಮಿನಿಗಳನ್ನು ನಿಯೋಜಿಸಬಹುದು. ಏಕಕಾಲದಲ್ಲಿ ನಾಲ್ವರ ನಾಮ ನಿರ್ದೇಶನ ಮಾಡಿದರೆ ಮೊದಲ ನಾಮಿನಿಯ ನಿಧನದ ನಂತರವೇ ಎರಡನೇ ನಾಮಿನಿ ಪ್ರಸ್ತುತವಾಗುತ್ತಾನೆ/ತ್ತಾಳೆ.
►ಒಂದೇ ಬಾರಿ ನಾಮ ನಿರ್ದೇಶನ: ಈ ಆಯ್ಕೆಯಡಿ ಠೇವಣಿದಾರರು ನಾಲ್ಕು ಜನರವರೆಗೆ ನಾಮ ನಿರ್ದೇಶನ ಮಾಡಬಹುದು. ಪ್ರತಿ ನಾಮಿನಿಯ ಪಾಲನ್ನು ಅಥವಾ ಶೇಕಡಾವಾರು ಹಕ್ಕನ್ನು ಸ್ಪಷ್ಟವಾಗಿ ನಮೂದಿಸಬಹುದು ಮತ್ತು ಒಟ್ಟು ಪಾಲುಗಳು ಶೇ.100 ಆಗಿರಬೇಕು. ಇದು ಎಲ್ಲ ನಾಮಿನಿಗಳ ನಡುವೆ ವಿತರಣೆಯನ್ನು ಪಾರದರ್ಶಕಗೊಳಿಸುತ್ತದೆ.
ಬಹು ನಾಮನಿರ್ದೇಶನಗಳನ್ನು ಮಾಡುವುದು, ರದ್ದುಗೊಳಿಸುವುದು ಅಥವಾ ನಿರ್ದಿಷ್ಟ ಪಡಿಸುವ ಕಾರ್ಯವಿಧಾನ ಮತ್ತು ನಿಗದಿತ ನಮೂನೆಗಳ ಬಗ್ಗೆ ವಿವರಗಳನ್ನು ಸೂಕ್ತ ಸಮಯದಲ್ಲಿ ಪ್ರಕಟಿಸಲಾಗುವುದು ಎಂದು ವಿತ್ತ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.







