ಮುಂಬೈ | ಕೇಂದ್ರ ಸರಕಾರದಿಂದ ಕೋಟ್ಯಂತರ ರೂ.ಬಹುಮಾನ ಕೊಡಿಸುವ ಅಮಿಷವೊಡ್ಡಿ ಬ್ಯಾಂಕ್ ಉದ್ಯೋಗಿಗೆ 4 ಕೋಟಿ ರೂ. ವಂಚನೆ

ಸಾಂದರ್ಭಿಕ ಚಿತ್ರ | PC : freepik.com
ಮುಂಬೈ,ಸೆ.23: ಕೇಂದ್ರ ಸರಕಾರದಿಂದ 38 ಕೋಟಿ ರೂ. ಬಹುಮಾನ ಕೊಡಿಸುವುದಾಗಿ ನಂಬಿಸಿ, ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಅವರ ಬಂಧುವೊಬ್ಬರು 4 ಕೋಟಿ ರೂ ವಂಚಿಸಿದ ಘಟನೆ ವರದಿಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರದ ಇತರ ಉನ್ನತ ಅಧಿಕಾರಿಗಳ ಜೊತೆ ಹುಸಿ ಕಾನ್ಫರೆನ್ಸ್ ಕಾಲ್ ನಡೆಸಿದಂತೆೆ ನಾಟಕವಾಡಿ, ಆರೋಪಿಯು ಅವರನ್ನು ಮರುಳುಗೊಳಿಸಿರುವ ವಿಷಯ ಬೆಳಕಿಗೆ ಬಂದಿದೆ.
ಸೂರ್ಯಕಾಂತ್ ಥೋರಟ್, ಬಂಧುವಿನಿಂದ ಮೋಸ ಹೋದ ಬ್ಯಾಂಕ್ ಉದ್ಯೋಗಿ.
ಸಂಬಂಧಿಯೊಬ್ಬರು 2019ರಲ್ಲಿ ಅವರನ್ನು ಸಂಪರ್ಕಿಸಿ, ತನ್ನ ಪುತ್ರ ಕೇಂದ್ರ ಸರಕಾರದ ಬೇಹುಗಾರಿಕಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ವಿಶೇಷ ಮಿಷನ್ ಒಂದರಲ್ಲಿ ಆತ ಪ್ರಮುಖ ಪಾತ್ರ ವಹಿಸಿದ್ದ. ಆತನ ಶಿಫಾರಸಿನಂತೆ ಉತ್ತಮ ಸೇವೆ ಸಲ್ಲಿಸಿದವರಿಗೆ ಕೇಂದ್ರ ಸರಕಾರವು 38 ಕೋಟಿ ರೂ. ಬಹುಮಾನ ನೀಡಲಿದ್ದು, ಅದನ್ನು ಸೂರ್ಯಕಾಂತ್ ಅವರಿಗೆ ಕೊಡಿಸುವುದಾಗಿ ಆತ ಮರಳುಮಾಡಿದ್ದ. ಇದಕ್ಕಾಗಿ ಸೂರ್ಯಕಾಂತ್ ಅವರು ಪರಿಷ್ಕರಣಾ ಶುಲ್ಕ, ಕೋರ್ಟ್ ಫೀಸ್ ಹಾಗೂ ಹಿರಿಯ ಅಧಿಕಾರಿಗಳಿಗೆ ಉಡುಗೊರೆಗಳನ್ನು ನೀಡಬೇಕಾಗುತ್ತದೆ ಎಂದು ಆತ ನಂಬಿಸಿದ್ದ.
ತನ್ನ ಮಾತುಗಳನ್ನು ನಂಬುವಂತೆ ಮಾಡಲು ಆರೋಪಿಯು, ಸೂರ್ಯಕಾಂತ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಾಗೂ ಇತರ ಉನ್ನತ ಅಧಿಕಾರಿಗಳ ಸೋಗಿನ ವ್ಯಕ್ತಿಗಳೊಂದಿಗೆ ಕಾನ್ಫರೆನ್ಸ್ ಕರೆಗಳನ್ನು ಮಾಡಿಸಿದ್ದ. ಇದಕ್ಕೆ ಮರುಳಾದ ಸೂರ್ಯಕಾಂತ್ ಅವರು 2020ರಿಂದ 2024ರವರೆಗೆ ತನ್ನ ವಿವಿಧ ಬ್ಯಾಂಕ್ ಖಾತೆಗಳಿಂದ, ಆರೋಪಿಗೆ ಕೋಟ್ಯಂತರ ರೂ.ಗಳನ್ನು ನೀಡಿದ್ದರು. ಅದೂ ಸಾಲದಾಗ ತನ್ನ ಪರಿಚಿತರಿಂದಲೇ ಸಾಲ ಪಡೆದು ಆತನಿಗೆ ಹಣ ನೀಡಿದ್ದರು.
ತನ್ನ ಬಂಧುವು, ಆತನ ಪುತ್ರನ ಐಡಿ ಕಾರ್ಡ್, ರಿವಾಲ್ವರ್ ಹಾಗೂ ಬ್ಯಾಂಕ್ ಸಂದೇಶವನ್ನು ತೋರಿಸಿದ್ದ. ಆತನ ಪುತ್ರ ತರಬೇತಿಗಾಗಿ ತೆರಳಿದ್ದು, ಆತ ಮನೆಗೆ ಬರುತ್ತಿಲ್ಲವೆಂದು ಆತನ ಕುಟುಂಬಿಕರು ಹೇಳಿದ್ದರು. ಹೀಗಾಗಿ ನಾನು ಅವರನ್ನು ನಂಬಿದ್ದೆ ಎಂದು ಸೂರ್ಯಕಾಂತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆತನಿಗೆ ಹಣ ನೀಡಲು ತನ್ನ ಫ್ಲ್ಯಾಟ್ಗಳು, ಅಂಗಡಿ, ಕಾರು ಹಾಗೂ ಹೆಂಡತಿಯ ಒಡವೆಯನ್ನು ಕೂಡಾ ಮಾರಾಟ ಮಾಡಿದ್ದೆ. ಅದೂ ಸಾಲದಾದಾಗ ತನ್ನ ಭವಿಷ್ಯ ನಿಧಿಯಿಂದಲೂ ಹಣ ತೆಗೆದುಕೊಟ್ಟಿದ್ದೆ ಎಂದು ಸೂರ್ಯಕಾಂತ್ ತಿಳಿಸಿದ್ದಾರೆ.
‘‘ಅಮಿತ್ಶಾ, ಅಜಿತ್ ಧೋವಲ್ ಹಾಗೂ ಇತರ ಉನ್ನತ ಅಧಿಕಾರಿಗಳ ಸೋಗು ಧರಿಸಿದ ವ್ಯಕ್ತಿಗಳೊಂದಿಗೆ ಆತ ಕಾನ್ಫರೆನ್ಸ್ ಕರೆ ಮಾಡಿಸಿದ್ದ. ಅವರೆಲ್ಲರೂ ತನಗೆ ಶೀಘ್ರದಲ್ಲೇ ಬಹುಮಾನ ಲಭಿಸಲಿದ್ದು, ಚಿಂತಿಸುವ ಅಗತ್ಯವಿಲ್ಲವೆಂದು ಭರವಸೆ ನೀಡಿದ್ದರು. ಆದರೆ ಕರೆ ಮಾಡಿದವರು ನಕಲಿ ವ್ಯಕ್ತಿಗಳು ಎಂದು ಆನಂತರ ತನಗೆ ಆರಿವಾಯಿತು. ನನ್ನ ಕುಟುಂಬಿಕರೇ ನನ್ನ ಬೆನ್ನಿಗೆ ಇರಿಯುವರೆಂದು ನಾನು ಎಂದೂ ಯೋಚಿಸಿರಲಿಲ್ಲ’’ ಎಂದು ಆತ ಹೇಳಿದ್ದಾರೆ.
ಆನಂತರ ಹಣವನ್ನು ಹಿಂತಿರುಗಿಸುವಂತೆ, ಬಂಧುವಿಗೆ ತಿಳಿಸಿದಾಗ ತನ್ನ ಪುತ್ರ ಮಹತ್ವದ ಮಿಶನ್ ಒಂದರಲ್ಲಿ ವಿದೇಶದಲ್ಲಿದ್ದಾನೆಂದು ಹೇಳಿದ್ದ, ಆಗ ನಾನು ಮೋಸಹೋಗಿರುವುದು ನನಗೆ ಮನವರಿಕೆಯಾಯಿತು ಎಂದು ಸೂರ್ಯಕಾಂತ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶುಭಂ ಸುನೀಲ್ ಪ್ರಭಾಳೆ, ಸುನೀಲ್ ಬಾಬನ್ರಾವ್ ಪ್ರಭಾಳೆ, ಒಂಕಾರ್ ಸುನೀಲ್ ಪ್ರಭಾಳೆ, ಪ್ರಶಾಂತ್ರಾಜೇಂದ್ರ ಪ್ರಭಾಳೆ ಹಾಗೂ ಭಾಗ್ಯಶ್ರೀ ಸುನೀಲ್ ಪ್ರಭಾಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ಆರ್ಥಿಕ ಅಪರಾಧಗಳ ಘಟಕಕ್ಕೆ ಹಸ್ತಾಂತರಿಸಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.







