ದೇವರಿಗೆ ಮುಸ್ಲಿಮ್ ನೇಕಾರರು ತಯಾರಿಸಿದ ಉಡುಪು ನಿಷೇಧಿಸುವ ಕರೆಯನ್ನು ತಿರಸ್ಕರಿಸಿದ ಬಾಂಕೆ ಬಿಹಾರಿ ಮಂದಿರ

ಸಾಂದರ್ಭಿಕ ಚಿತ್ರ (credit: indiatoday.in)
ಆಗ್ರಾ: ಶ್ರೀಕೃಷ್ಣನಿಗೆ ಮುಸ್ಲಿಮ್ ನೇಕಾರರು ತಯಾರಿಸಿದ ಉಡುಪುಗಳನ್ನು ನಿಷೇಧಿಸುವಂತೆ ಕೋರಿದ್ದ ಪ್ರಸ್ತಾವವನ್ನು ವೃಂದಾವನದ ಬಾಂಕೆ ಬಿಹಾರಿ ಮಂದಿರದ ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ದೇವರ ಉಡುಪುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂದು ಮಂದಿರದ ಆಡಳಿತ ಮಂಡಳಿಯು ಸ್ಪಷ್ಟಪಡಿಸಿದೆ.
ಮಥುರಾದಲ್ಲಿ ಶಾಹಿ ಈದ್ಗಾ ಮಸೀದಿ ವಿವಾದದಲ್ಲಿ ಭಾಗಿಯಾಗಿರುವ ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್ನ ಅಧ್ಯಕ್ಷ ದಿನೇಶ ಫಲಹರಿ ಮಂದಿರದ ಆಡಳಿತ ಮಂಡಳಿಗೆ ಅಹವಾಲು ಸಲ್ಲಿಸಿದ್ದು, ‘ನಮ್ಮ ಧರ್ಮವನ್ನು ಅನುಸರಿಸದ ಯಾವುದೇ ಪಾಷಂಡಿ ತನ್ನ ಕೈಗಳಿಂದ ತಯಾರಿಸಿದ ಏನನ್ನಾದರೂ ಠಾಕೂರ್ಜಿ(ಭಗವಾನ ಕೃಷ್ಣ)ಗೆ ಅರ್ಪಿಸಿದರೆ ಅದನ್ನು ಸ್ವೀಕರಿಸಬಾರದು ಮತ್ತು ಹಾಗೆ ಮಾಡುವವರು ಘೋರ ಪಾಪವನ್ನು ಮಾಡುತ್ತಿದ್ದಾರೆ’ ಎಂದು ಅದರಲ್ಲಿ ಹೇಳಲಾಗಿತ್ತು.
ಬುಧವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಂದಿರದ ಆಡಳಿತ ಮಂಡಳಿ ಸದಸ್ಯ ಜ್ಞಾನೇಂದ್ರ ಕಿಶೋರ ಗೋಸ್ವಾಮಿ ಅವರು,‘‘ಮುಸ್ಲಿಮ್ ನೇಕಾರರು ತಯಾರಿಸುವ ‘ಪೋಷಾಕು’ಗಳನ್ನು ಬಳಸುವುದನ್ನು ನಿಲ್ಲಿಸುವಂತೆ ಪ್ರಸ್ತಾವವನ್ನು ನಾವು ಸ್ವೀಕರಿಸಿದ್ದೇವೆ. ಠಾಕೂರ್ಜಿಗೆ ಅರ್ಪಿಸಲಾಗುವ ಪೋಷಾಕುಗಳ ಶುದ್ಧತೆ ಮತ್ತು ಪಾವಿತ್ರ್ಯವನ್ನು ಖಚಿತ ಪಡಿಸಿಕೊಳ್ಳುವುದು ನಮ್ಮ ಪ್ರಮುಖ ಕಾಳಜಿಯಾಗಿದೆ. ಮುಸ್ಲಿಮ್ ಸಮುದಾಯದ ಸದಸ್ಯರು ಠಾಕೂರ್ಜಿಯವರಲ್ಲಿ ನಂಬಿಕೆಯನ್ನು ಹೊಂದಿದ್ದರೆ ಅವರಿಂದ ಪೋಷಾಕುಗಳನ್ನು ಸ್ವೀಕರಿಸಲು ನಮಗೆ ಯಾವುದೇ ಆಕ್ಷೇಪವಿಲ್ಲ’’ ಎಂದು ತಿಳಿಸಿದರು. ಪ್ರಸ್ತಾವಗಳನ್ನು ಸಲ್ಲಿಸಲು ಯಾರು ಬೇಕಾದರೂ ಸ್ವತಂತ್ರರಿದ್ದಾರೆ ಎಂದರು.
164 ವರ್ಷಗಳಷ್ಟು ಹಳೆಯದಾದ ಬಾಂಕೆ ಬಿಹಾರಿ ಮಂದಿರಕ್ಕೆ ಪ್ರತಿದಿನ ವೈವಿಧ್ಯಮಯ ಹಿನ್ನೆಲೆಗಳ 30,000ದಿಂದ 40,000 ಭಕ್ತರು ಭೇಟಿ ನೀಡುತ್ತಿದ್ದು, ವಾರಾಂತ್ಯಗಳಲ್ಲಿ ಮತ್ತು ಉತ್ಸವಗಳ ಸಂದರ್ಭಗಳಲ್ಲಿ ಅವರ ಸಂಖ್ಯೆ ಒಂದು ಲಕ್ಷವನ್ನು ಮೀರುತ್ತದೆ.
ಈ ನಡುವೆ ನಗರ ದಂಡಾಧಿಕಾರಿ ರಾಕೇಶ್ ಕುಮಾರ್ ಅವರು, ದಿನೇಶ್ ಫಲಹರಿ ಸಲ್ಲಿಸಿರುವ ಅಹವಾಲಿನ ಬಗ್ಗೆ ತನಗೆ ತಿಳಿದಿಲ್ಲ, ಆದರೆ ಈ ವಿಷಯವನ್ನು ಪರಿಶೀಲಿಸುತ್ತೇನೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.