ಎರಡು ರಾಜ್ಯಗಳಲ್ಲಿ 13 ಗಂಟೆಗಳ ಕಾರ್ಯಾಚರಣೆ; 16 ಕೋಟಿ ದುರುಪಯೋಗ ಮಾಡಿದ ಬ್ಯಾಂಕರ್ ಬಂಧನ

ಮುಂಬೈ: ಬ್ಯಾಂಕ್ ಆಫ್ ಇಂಡಿಯದ ಅಮಾನತುಗೊಂಡ ಅಧಿಕಾರಿ ಹಿತೇಶ್ ಸಿಂಗ್ಲಾನನ್ನು ಜಾರಿ ನಿರ್ದೇಶನಾಲಯ (ಈಡಿ) ಬುಧವಾರ ಬಂಧಿಸಿದೆ. ಹಿರಿಯ ನಾಗರಿಕರು, ಅಪ್ರಾಪ್ತ ವಯಸ್ಕರು, ಮೃತ ಗ್ರಾಹಕರು ಹಾಗೂ ದೀರ್ಘಕಾಲ ನಿಷ್ಕ್ರಿಯವಾಗಿದ್ದ 127 ಖಾತೆಗಳಿಂದ 16.10 ಕೋಟಿ ರೂಪಾಯಿ ದುರುಪಯೋಗ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸಿಂಗ್ಲಾ ವಂಚನೆ ಬೆಳಕಿಗೆ ಬಂದ ತಕ್ಷಣ ತಲೆಮರೆಸಿಕೊಂಡಿದ್ದ. ಮಂಗಳವಾರ ರಾತ್ರಿ ಉಜ್ಜಯಿನಿ–ವೆರಾವಲ್ ಮಾರ್ಗದ ಮಹಾಮನಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಆತ ಪ್ರಯಾಣಿಸುತ್ತಿರುವುದನ್ನು ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈಡಿ ತಂಡವು ಪತ್ತೆಹಚ್ಚಿತು.
ಆರೋಪಿಯು ಸ್ಲೀಪರ್ ಕ್ಲಾಸ್ ಟಿಕೆಟ್ ಬುಕ್ ಮಾಡಿಕೊಂಡಿದ್ದರೂ ಮಧ್ಯದಲ್ಲಿ ಎಸಿ ಕೋಚ್‌ಗೆ ಬದಲಾಯಿಸಿಕೊಂಡು ತನಿಖಾಧಿಕಾರಿಗಳ ಕಣ್ಗಾವಲು ತಪ್ಪಿಸಲು ಪ್ರಯತ್ನಿಸಿದ್ದ. ನಿರಂತರವಾಗಿ ಆಸನ ಮತ್ತು ಬೋಗಿಗಳನ್ನು ಬದಲಾಯಿಸುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದರೂ, ರೈಲು ಅಹಮದಾಬಾದ್ ತಲುಪಿದಾಗ ಅಧಿಕಾರಿಗಳು ರೈಲ್ವೆ ಸಿಬ್ಬಂದಿಯ ಸಹಕಾರದಿಂದ ಆತನನ್ನು ಬಂಧಿಸಲಾಯಿತು.
ಮೇ 2023ರಿಂದ ಜುಲೈ 2025ರವರೆಗೆ ಸಿಂಗ್ಲಾ ಬ್ಯಾಂಕ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದ ಎನ್ನಲಾಗಿದೆ. ಅನುಮತಿಯಿಲ್ಲದೆ ಸ್ಥಿರ ಠೇವಣಿಗಳು, ಪಿಪಿಎಫ್ ಖಾತೆಗಳು, ಹಿರಿಯ ನಾಗರಿಕರ ಉಳಿತಾಯ ಖಾತೆಗಳು ಮತ್ತು ನಿಷ್ಕ್ರಿಯ ಖಾತೆಗಳನ್ನು ಮುಚ್ಚಿ, ಆ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿನ ತನ್ನ ವೈಯಕ್ತಿಕ ಖಾತೆಗೆ ಸಣ್ಣ ಕಂತುಗಳಲ್ಲಿ ವರ್ಗಾಯಿಸುತ್ತಿದ್ದ. ಪರಿಶೀಲನೆಗೆ ಒಳಗಾಗುವ ಸಾಧ್ಯತೆ ಕಡಿಮೆ ಇರುವ ಗ್ರಾಹಕರ ಖಾತೆಗಳನ್ನು ಮಾತ್ರ ಗುರಿಯಾಗಿಸಿಕೊಂಡುದರಿಂದ ವಂಚನೆ ದೀರ್ಘಕಾಲ ರಹಸ್ಯವಾಗಿಯೇ ಉಳಿಯಿತು ಎಂದು ತಿಳಿದು ಬಂದಿದೆ.
ಆಗಸ್ಟ್ 6ರಂದು BOI ಉಪ ವಲಯ ವ್ಯವಸ್ಥಾಪಕ ಓಂ ಪ್ರಕಾಶ್ ಸಲ್ಲಿಸಿದ ದೂರಿನ ಮೇರೆಗೆ, ಸಿಬಿಐ ಭ್ರಷ್ಟಾಚಾರ ನಿಗ್ರಹ ಶಾಖೆಯು ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಿಂಗ್ಲಾ ಹಾಗೂ ಸಹಚರರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಆ ಪ್ರಕರಣವನ್ನು ಈಡಿ ತನಿಖೆ ಆರಂಭಿಸಿತು.
ವಂಚಿಸಿದ ಹಣದ ಒಂದು ಭಾಗವನ್ನು ಸಿಂಗ್ಲಾ ಷೇರು ಮಾರುಕಟ್ಟೆಗೆ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ದುರುಪಯೋಗಗೊಂಡ ಮೊತ್ತವನ್ನು ವಾಪಸ್ ಪಡೆಯಲು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಆತನ ಸಹಚರಿಗೆ ಸೇರಿದ ಪ್ರದೇಶದಲ್ಲಿಯೂ ಶೋಧ ಕಾರ್ಯಾಚರಣೆ ನಡೆದಿದೆ.
ಬಂಧನದ ಬಳಿಕ ಸಿಂಗ್ಲಾನನ್ನ ಮುಂಬೈನ ವಿಶೇಷ ಹಣ ವರ್ಗಾವಣೆ ತಡೆ ಕಾಯ್ದೆ (PMLA) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು ಮಂಗಳವಾರದವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿದೆ.ಈ ಕುರಿತು ಪ್ರತಿಕ್ರಿಯಿಸಿದ
ಈಡಿ ಅಧಿಕಾರಿಯೊಬ್ಬರು, “ಈ ವಂಚನೆಯಿಂದ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅದರ ಗ್ರಾಹಕರಿಗೆ ಭಾರೀ ಆರ್ಥಿಕ ನಷ್ಟವಾಗಿದೆ. ಸಂಸ್ಥೆಯ ಖ್ಯಾತಿಗೆ ಹಾನಿಯಾಗಿದ್ದು, ಸಾರ್ವಜನಿಕ ನಂಬಿಕೆಗೆ ತೀವ್ರ ಧಕ್ಕೆಯಾಗಿದೆ” ಎಂದು ತಿಳಿಸಿದ್ದಾರೆ.







