ಬಿಹಾರ| ಮತದಾರರ ಅಧಿಕಾರ ಯಾತ್ರೆಯಲ್ಲಿ ಪ್ರಧಾನಿ ಮೋದಿಗೆ ನಿಂದನೆ ಆರೋಪ : ಪ್ರತಿಭಟನೆ ವೇಳೆ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ

ಪಾಟ್ನಾ: ರಾಹುಲ್ ಗಾಂಧಿ ಅವರ 'ಮತದಾರರ ಅಧಿಕಾರ ಯಾತ್ರೆ'ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ವೇಳೆ ಶುಕ್ರವಾರ ಪಾಟ್ನಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ಬಿಜೆಪಿಯ ಪ್ರತಿಭಟನಾ ಮೆರವಣಿಗೆ ಬಿಹಾರ ಕಾಂಗ್ರೆಸ್ ರಾಜ್ಯ ಕಚೇರಿ ಸದಾಕತ್ ಆಶ್ರಮದ ಬಳಿ ಸಾಗುವಾಗ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ನುಗ್ಗಿದ ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ.
ಘರ್ಷಣೆಗೆ ಪ್ರಚೋದನೆ ನೀಡಿದ್ದಾರೆ ಎಂದು ಎರಡೂ ಪಕ್ಷಗಳು ಪರಸ್ಪರ ಆರೋಪ ಮಾಡಿಕೊಂಡಿವೆ. ಜನರು ಕಲ್ಲು ತೂರಾಟ ನಡೆಸುವ ಮೊದಲು ಪಾಟ್ನಾದ ಕಾಂಗ್ರೆಸ್ ಕಚೇರಿಯ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೆವು ಎಂದು ಬಿಜೆಪಿ ಕಾರ್ಯಕರ್ತರು ಹೇಳಿಕೊಂಡಿದ್ದಾರೆ. ಮತ್ತೊಂದೆಡೆ, ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ವೈರಲ್ ವೀಡಿಯೊಗಳಲ್ಲಿ, ಹಲವಾರು ಬಿಜೆಪಿ ಕಾರ್ಯಕರ್ತರು ಪಾಟ್ನಾದ ಕಾಂಗ್ರೆಸ್ ಕಚೇರಿಯ ಗೇಟುಗಳನ್ನು ಬಲವಂತವಾಗಿ ತೆಗೆದು ಒಳಗೆ ನುಗ್ಗುತ್ತಿರುವುದು ಕಂಡುಬಂದಿದೆ. ಮತ್ತೊಂದು ವೀಡಿಯೊದಲ್ಲಿ, ಪಾಟ್ನಾದ ಕಾಂಗ್ರೆಸ್ ಕಚೇರಿಯ ಹೊರಗೆ ಎರಡೂ ಪಕ್ಷಗಳ ಸದಸ್ಯರು ಪರಸ್ಪರ ಹೊಡೆದಾಡುತ್ತಿರುವುದು ಕಂಡುಬಂದಿದೆ.
#WATCH | Patna, Bihar: BJP and Congress workers clash as the former staged a protest against the latter in front of the Congress office. pic.twitter.com/GDUxM0JgyB
— ANI (@ANI) August 29, 2025







