ಪಂದ್ಯದಲ್ಲಿ ಗಂಭೀರ ಗಾಯಗೊಂಡರೆ ಬದಲಿ ಆಟಗಾರನ ಸೇರ್ಪಡೆಗೆ ಬಿಸಿಸಿಐ ಅವಕಾಶ

PC : @BCCI
ಮುಂಬೈ, ಆ. 16: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ)2025-26ರ ದೇಶಿ ಋತುವಿಗಾಗಿ ತನ್ನ ಆಡುವ ಸ್ಥಿತಿಗಳಿಗೆ ಒಂದು ಹೊಸ ವಿಧಿಯನ್ನು ಸೇರ್ಪಡೆಗೊಳಿಸಿದೆ. ಅಂದರೆ, ಒಂದಕ್ಕಿಂತ ಹೆಚ್ಚು ದಿನಗಳ ಕ್ರಿಕೆಟ್ ನಲ್ಲಿ ಓರ್ವ ಆಟಗಾರನಿಗೆ ಗಂಭೀರ ಗಾಯವಾದರೆ, ಆತನ ಬದಲಿಗೆ ಬೇರೊಬ್ಬ ಆಟಗಾರನನ್ನು ತಂಡಕ್ಕೆ ತರಲು ಈ ವಿಧಿ ಅವಕಾಶ ನೀಡುತ್ತದೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಇತ್ತೀಚೆಗೆ ಇಂಗ್ಲೆಂಡ್ನಲ್ಲಿ ನಡೆದ 5 ಟೆಸ್ಟ್ ಪಂದ್ಯಗಳ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಯ ವೇಳೆ ನಡೆದ ಘಟನೆಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ನ ನಿಯಮಗಳಿಗೆ ತಂದ ಅತ್ಯಂತ ಮಹತ್ವದ ತಿದ್ದುಪಡಿಗಳ ಪೈಕಿ ಒಂದಾಗಿದೆ.
ಟೆಸ್ಟ್ ಸರಣಿಯ ನಾಲ್ಕು ಮತ್ತು ಐದನೇ ಟೆಸ್ಟ್ಗಳಲ್ಲಿ ಇದಕ್ಕೆ ಸಂಬಂಧಿಸಿದ ನಾಟಕೀಯ ಘಟನೆಗಳು ಸಂಭವಿಸಿವೆ. ಈ ಪಂದ್ಯಗಳ ವೇಳೆ, ರಿಷಭ್ ಪಂತ್ರ ಪಾದಕ್ಕೆ ಗಾಯವಾಯಿತು ಮತ್ತು ಇಂಗ್ಲೆಂಡ್ನ ಕ್ರಿಸ್ ವೋಕ್ಸ್ರ ಭುಜದ ಎಲುಬು ಸ್ಥಾನಪಲ್ಲಟಗೊಂಡಿತು. ಇದರಿಂದಾಗಿ ಎರಡೂ ತಂಡಗಳು ಒಬ್ಬ ಆಟಗಾರನ ಕೊರತೆಯನ್ನು ಎದುರಿಸಿದವು. ತಲೆ ಜಜ್ಜಿದ ಗಾಯದ ವಿಷಯದಲ್ಲಿ ಆಟಗಾರನ ಬದಲಾವಣೆಗೆ ಹಲವು ವರ್ಷಗಳಿಂದ ಅವಕಾಶ ಇತ್ತಾದರೂ, ಇತರ ಗಂಭೀರ ಗಾಯಗಳ ವಿಷಯದಲ್ಲಿ ಆಟಗಾರರ ಬದಲಾವಣೆಗೆ ಅವಕಾಶವಿರಲಿಲ್ಲ.
‘‘ಪಂದ್ಯವೊಂದರ ಸಂದರ್ಭದಲ್ಲಿ ಓರ್ವ ಆಟಗಾರ ಗಂಭೀರವಾಗಿ ಗಾಯಗೊಂಡರೆ, ಬದಲಿ ಆಟಗಾರನನ್ನು ಕಣಕ್ಕೆ ಇಳಿಸಲು ಅವಕಾಶ ನೀಡಬಹುದಾಗಿದೆ’’ ಎಂದು ಬಿಸಿಸಿಐ ಪರಿಷ್ಕೃತ ನಿಯಮ ಹೇಳುತ್ತದೆ. ಗಾಯವು ಆಟದ ಮೈದಾನದಲ್ಲೇ ಸಂಭವಿಸಬೇಕು ಮತ್ತು ಗಾಯವು ಮೂಳೆ ಮುರಿತ, ಆಳವಾದ ಗಾಯ ಅಥವಾ ಎಲುಬು ಸ್ಥಾನಪಲ್ಲಟ ಮುಂತಾದ ಗಂಭೀರ ಗಾಯವಾಗಿರಬೇಕು.







