ಸುಸ್ಥಿರ ವಾಣಿಜ್ಯ ಯೋಜನೆಗೆ ಬ್ಯಾರೀಸ್ ಗ್ರೂಪ್ಗೆ CREDAI ರಾಷ್ಟ್ರೀಯ ಪ್ರಶಸ್ತಿ

Photo Credit : X \ @CREDAINational
ಹೊಸದಿಲ್ಲಿ, ಡಿ.19: ಸುಸ್ಥಿರ ವಾಣಿಜ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆಗಾಗಿ ಬ್ಯಾರೀಸ್ ಸಂಸ್ಥೆಗೆ CREDAI ನ್ಯಾಷನಲ್ ರಿಯಲ್ ಎಸ್ಟೇಟ್ ಎಕ್ಸಲೆನ್ಸ್ ಅವಾರ್ಡ್ ಲಭಿಸಿದೆ.
ಡಿಸೆಂಬರ್ 19ರಂದು ಹೊಸದಿಲ್ಲಿಯ ತಾಜ್ ಪ್ಯಾಲೇಸ್ ನಲ್ಲಿ ನಡೆದ CREDAI ನ್ಯಾಷನಲ್ ರಿಯಲ್ ಎಸ್ಟೇಟ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು. ಪ್ರಶಸ್ತಿಗಳ ಮೊದಲ ಆವೃತ್ತಿಯಲ್ಲಿ ದೇಶದಾದ್ಯಂತ 500ಕ್ಕೂ ಹೆಚ್ಚು ಡೆವಲಪರ್ಗಳು ಭಾಗವಹಿಸಿದ್ದು, 800ಕ್ಕೂ ಹೆಚ್ಚು ಯೋಜನೆಗಳನ್ನು ಪರಿಗಣನೆಗೆ ಸಲ್ಲಿಸಲಾಗಿತ್ತು. ಮೌಲ್ಯಮಾಪನದ ಬಳಿಕ 175 ಯೋಜನೆಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿದ್ದು, ಅವುಗಳಲ್ಲಿ 25 ಯೋಜನೆಗಳಿಗೆ ಪ್ರಶಸ್ತಿ ನೀಡಲಾಗಿದೆ.
ಬ್ಯಾರೀಸ್ ಗ್ರೂಪ್ ಪರವಾಗಿ ಸಂಸ್ಥೆಯ ಉಪ ವ್ಯವಸ್ಥಾಪಕ ನಿರ್ದೇಶಕ ಸಿದ್ದೀಕ್ ಬ್ಯಾರಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಅನುಷ್ಠಾನಗೊಳಿಸಿದ ಸುಸ್ಥಿರ ಕ್ರಮಗಳು, ಸುರಕ್ಷತಾ ಮಾನದಂಡಗಳು ಮತ್ತು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ NTT ಡೇಟಾ ಸೆಂಟರ್ ಪಾರ್ಕ್ ಯೋಜನೆಯ ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಗೆ ಈ ಮನ್ನಣೆ ದೊರೆತಿದೆ. ಹಸಿರು ತಂತ್ರಜ್ಞಾನ ಅಳವಡಿಸಿಕೊಂಡು ಮಾಡಲಾಗಿರುವ ಭಾರತದ ಮುಂದುವರಿದ ಡೇಟಾ ಸೆಂಟರ್ ಅಭಿವೃದ್ಧಿಗಳಲ್ಲಿ ಈ ಯೋಜನೆ ಪ್ರಮುಖವಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಉಪ ವ್ಯವಸ್ಥಾಪಕ ನಿರ್ದೇಶಕ ಸಿದ್ದೀಕ್ ಬ್ಯಾರಿ, CREDAI ರಾಷ್ಟ್ರೀಯ ಪ್ರಶಸ್ತಿಗಳ ಮೊದಲ ಆವೃತ್ತಿಯಲ್ಲಿ ಲಭಿಸಿದ ಈ ಗೌರವ ಬ್ಯಾರೀಸ್ ಗ್ರೂಪ್ಗೆ ಮಹತ್ವದ ಮೈಲಿಗಲ್ಲು. ಸುಸ್ಥಿರ ಅಭಿವೃದ್ಧಿ ಹಾಗೂ ಗುಣಮಟ್ಟದ ಇಂಜಿನಿಯರಿಂಗ್ಗೆ ಸಂಸ್ಥೆ ನೀಡುತ್ತಿರುವ ಆದ್ಯತೆಯ ಪ್ರತಿಫಲವೇ ಈ ಮನ್ನಣೆ ಎಂದು ಅವರು ಹೇಳಿದರು.







