"18 ಗಂಟೆಗಳ ಕಾಲ ಬಲವಂತದ ದುಡಿಸಿ, ಥಳಿಸುತ್ತಿದ್ದ ಮಾಲಕರು": ಬಳೆ ತಯಾರಿಕಾ ಕಾರ್ಖಾನೆಯಿಂದ ತಪ್ಪಿಸಿಕೊಂಡು ಪಾರಾದ ಏಳು ಬಾಲಕರು!

ಸಾಂದರ್ಭಿಕ ಚಿತ್ರ
ಜೈಪುರ: ರಾಜಸ್ಥಾನದಲ್ಲಿ ಇನ್ನೂ ಜೀವಂತವಿರುವ ಅಮಾನವೀಯ ಬಾಲ ಕಾರ್ಮಿಕ ಪದ್ಧತಿ ಬೆಳಕಿಗೆ ಬಂದಿದ್ದು, ಜೈಪುರದಲ್ಲಿನ ಬಳೆ ತಯಾರಿಕಾ ಕಾರ್ಖಾನೆಯೊಂದರಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಬಿಹಾರದ ಏಳು ಬಾಲಕರು, ಅಲ್ಲಿಂದ ಸೋಮವಾರ ರಾತ್ರಿ ತಪ್ಪಿಸಿಕೊಂಡು ಸ್ಮಶಾನವೊಂದರಲ್ಲಿ ಅಡಗಿಕೊಂಡಿದ್ದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತಾಶೆ, ಭೀತಿಯಿಂದ ಸ್ಮಶಾನವೊಂದರಲ್ಲಿ ಅಡಗಿ ಕುಳಿತಿದ್ದ ಬಾಲಕರನ್ನು ಭಟ್ಟ ಬಸ್ತಿ ಪ್ರದೇಶದಲ್ಲಿ ಸ್ಥಳೀಯ ನಿವಾಸಿಗಳು ಪತ್ತೆ ಹಚ್ಚಿದ್ದಾರೆ. ಈ ಕುರಿತು ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ ನಂತರ, ತಕ್ಷಣವೇ ಸ್ಥಳಕ್ಕೆ ಧಾವಿಸಿದ ಭಟ್ಟಿ ಬಸ್ತಿ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಅವರನ್ನು ರಕ್ಷಿಸಿದ್ದಾರೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎರಡು ತಿಂಗಳ ಹಿಂದೆ ಪ್ರವಾಸದ ಸುಳ್ಳು ಭರವಸೆ ನೀಡಿ ಈ ಬಾಲಕರನ್ನು ಬಿಹಾರದಲ್ಲಿನ ಅವರ ಗ್ರಾಮಗಳಿಂದ ಕಳ್ಳಸಾಗಣೆ ಮಾಡಲಾಗಿತ್ತು. ಅವರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ದಿನವೊಂದಕ್ಕೆ 18 ಗಂಟೆಗಳ ಕಾಲ ದುಡಿದರೂ, ಅವರಿಗೆ ದಿನಕ್ಕೆ ಕೇವಲ ಒಂದು ಬಾರಿ ಊಟ ನೀಡಲಾಗುತ್ತಿತ್ತು ಹಾಗೂ ಅವರ ಮೇಲೆ ಹಲ್ಲೆ ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಆರಂಭದಲ್ಲಿ ಯಾವುದೇ ಹೇಳಿಕ ನೀಡಲು ಹಿಂಜರಿಕೆ ತೋರಿದ್ದ ಬಾಲಕರು, ಬಳಿಕ ಸಂಸದ್ ಮಿಯಾ ಎಂಬ ವ್ಯಕ್ತಿ ತಮ್ಮನ್ನು ಜೈಪುರಕ್ಕೆ ಕರೆ ತಂದ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಇದರ ಬೆನ್ನಿಗೇ, ಸಂಸದ್ ಮಿಯಾನನ್ನು ಪೊಲೀಸರು ವಶಕ್ಕೆ ಪಡೆದದ್ದು, ಆತನ ವಿರುದ್ಧ ಬಾಲಾಪರಾಧ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜೈಪುರದ ಬಳೆ ತಯಾರಿಕಾ ಘಟಕಗಳಲ್ಲಿ ಇಂದಿಗೂ ಬಾಲ ಕಾರ್ಮಿಕ ಪದ್ಧತಿ ಜೀವಂತವಾಗಿ ಉಳಿದಿರುವ ಸಮಸ್ಯೆಯಾಗಿದೆ. ಗಾಜಿನ ಕೆಲಸ ಮಾಡಲು ಸೂಕ್ತವಾದ ಮಕ್ಕಳ ಸಣ್ಣ ಹಾಗೂ ಮೃದು ಕೈಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕಾರ್ಖಾನೆಯ ಮಾಲಕರು, ಅವರಿಗೆ ವಯಸ್ಕ ಕಾರ್ಮಿಕರಿಗಿಂತ ಕಡಿಮೆ ವೇತನ ಪಾವತಿಸುತ್ತಾರೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.







