ಬೆಂಗಳೂರು-ಎರ್ನಾಕುಲಂ ವಂದೇಭಾರತ್ ರೈಲಿಗೆ ಚಾಲನೆ: ವೇಳಾಪಟ್ಟಿ ಬಿಡುಗಡೆ

Photo Credit : @RailMinIndia
ಎರ್ನಾಕುಲಂ: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಎರ್ನಾಕುಲಂ ನಡುವೆ ಸಂಚರಿಸಲಿರುವ ವಂದೇ ಭಾರತ್ ರೈಲಿಗೆ ಶನಿವಾರ ಹಸಿರು ನಿಶಾನೆ ತೋರಿದರು.
ಇದರೊಂದಿಗೆ, ಬನಾರಸ್-ಖಜುರಾಹೊ, ಲಕ್ನೊ-ಸಹರಣ್ಪುರ್ ಹಾಗೂ ಫಿರೋಝ್ ಪುರ-ದಿಲ್ಲಿ ನಡುವಿನ ವಂದೇಭಾರತ್ ರೈಲುಗಳ ಸಂಚಾರಕ್ಕೂ ಚಾಲನೆ ನೀಡಿದರು.
ಕೇರಳ-ತಮಿಳುನಾಡು-ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಈ ಆರಾಮದಾಯಕ ರೈಲು ಪ್ರಯಾಣದ ಭಾಗವಾಗಿ, ಎರ್ನಾಕಲುಂ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು-ಎರ್ನಾಕುಲಂ ಮಾರ್ಗದ ವಂದೇಭಾರತ್ ರೈಲಿಗೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಈ ರೈಲು ಚೆನ್ನೈನಲ್ಲಿರುವ ದಕ್ಷಿಣ ರೈಲ್ವೆ ವಲಯಕ್ಕೆ ಸೇರಿದ್ದು, ನ. 9ರಿಂದ ಅಧಿಕೃತವಾಗಿ ತಮ್ಮ ದೈನಂದಿನ ಸಂಚಾರ ಪ್ರಾರಂಭಿಸಲಿದೆ.
ಈ ರೈಲು ಕೇರಳದ ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ತಮಿಳುನಾಡಿನ ಕೊಯಮತ್ತೂರು, ತಿರುಪ್ಪೂರು, ಈರೋಡ್, ಸೇಲಂ ಹಾಗೂ ಕರ್ನಾಟಕದ ಕೆ.ಆರ್.ಪುರಂ ಮತ್ತು ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸಲಿದೆ.
ಬುಧವಾರ ಹೊರತುಪಡಿಸಿ, ಪ್ರತಿದಿನ ಬೆಳಗ್ಗೆ 5.10ಕ್ಕೆ ಈ ರೈಲು ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ ನಿರ್ಗಮಿಸಲಿದ್ದು, ಅದೇ ದಿನ ಮಧ್ಯಾಹ್ನ 1.50ಕ್ಕೆ ಎರ್ನಾಕುಲಂ ತಲುಪಲಿದೆ.
ಇದೇ ರೀತಿ, ಬುಧವಾರ ಹೊರತುಪಡಿಸಿ, ಪ್ರತಿದಿನ ಮಧ್ಯಾಹ್ನ 2.20ಕ್ಕೆ ಎರ್ನಾಕುಲಂನಿಂದ ಬೆಂಗಳೂರಿಗೆ ಈ ರೈಲು ನಿರ್ಗಮಿಸಲಿದ್ದು, ಅದೇ ದಿನ ರಾತ್ರಿ 11 ಗಂಟೆಗೆ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣ ತಲುಪಲಿದೆ.
583 ಕಿಮೀ ದೂರದ ಈ ಪ್ರಯಾಣವನ್ನು ವಂದೇಭಾರತ್ ರೈಲು 8 ಗಂಟೆ 40 ನಿಮಿಷಗಳ ಅವಧಿಯಲ್ಲಿ ಕ್ರಮಿಸಲಿದೆ. ಕೇರಳದ ಆರ್ಥಿಕ ರಾಜಧಾನಿ ಎರ್ನಾಕುಲಂ-ಕೊಚ್ಚಿ ನಡುವೆ ಈ ರೈಲು ಪ್ರಮುಖ ಸಂಪರ್ಕ ಸೇತುವೆಯಾಗಲಿದೆ. ಕೇರಳ-ತಮಿಳುನಾಡು-ಕರ್ನಾಟಕ ಮಾರ್ಗದಲ್ಲಿ ಸಂಚರಿಸಲಿರುವ ಈ ರೈಲು, ಒಟ್ಟು ಎಂಟು ಕೋಚ್ ಗಳನ್ನು ಒಳಗೊಂಡಿರಲಿದೆ.
ಈ ಮಾರ್ಗದಲ್ಲಿ ಸಂಚರಿಸಲಿರುವ ನೂತನ ವಂದೇಭಾರತ್ ರೈಲು ಈ ಭಾಗದ ಬಹುಬೇಡಿಕೆಯ ರೈಲಾಗಲಿದೆ ಎಂದು ದಕ್ಷಿಣ ರೈಲ್ವೆ ತನ್ನ ಪ್ರಕಟನೆಯಲ್ಲಿ ವಿಶ್ವಾ ಸ ವ್ಯಕ್ತಪಡಿಸಿದೆ.







