ಬೆಂಗಳೂರಿನ 10 ಚದರ ಅಡಿ ಮನೆಯಲ್ಲಿ 80 ಜನ ಮತದಾರರು!

ರಾಹುಲ್ ಗಾಂಧಿ | PC : PTI
ಬೆಂಗಳೂರು: ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ ಬೆನ್ನಿಗೇ, India Today ನಡೆಸಿರುವ ಗ್ರೌಂಡ್ ರಿಪೋರ್ಟ್ ವೇಳೆ ಕೇವಲ 10 ಚದರ ಅಡಿ ವಿಸ್ತೀರ್ಣದ ಮನೆ ಹೊಂದಿರುವ ವಿಳಾಸದಲ್ಲಿ 80 ಜನ ಮತದಾರರು ನೋಂದಣಿಯಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ನಿನ್ನೆ ಸುದ್ದಿ ಗೋಷ್ಠಿ ನಡೆಸಿದ್ದ ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆಸಲಾಗಿದೆ ಎಂದು ಆಧಾರಸಹಿತವಾಗಿ ಆರೋಪಿಸಿದ್ದರು. ಇದರ ಬೆನ್ನಿಗೇ ಗ್ರೌಂಡ್ ರಿಪೋರ್ಟ್ ಮಾಡಲು ತೆರಳಿದ್ದ India Today ಸುದ್ದಿ ಸಂಸ್ಥೆಯ ವರದಿಗಾರರು, ಮಹಾದೇವಪುರ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 470ರಲ್ಲಿರುವ ಮುನಿರೆಡ್ಡಿ ಗಾರ್ಡನ್ ನ ಮನೆ ಸಂಖ್ಯೆ 35ರಲ್ಲಿ ಸುಮಾರು 80 ಮಂದಿ ಮತದಾರರು ಅಕ್ರಮವಾಗಿ ನೋಂದಣಿಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆ.
ಈ ಮನೆಯ ವಿಸ್ತೀರ್ಣ ಕೇವಲ 10-15 ಚದರ ಅಡಿ ಮಾತ್ರವಿದ್ದು, ಸದ್ಯ ಈ ಮನೆಯಲ್ಲಿ ಪಶ್ಚಿಮ ಬಂಗಾಳದ ಆಹಾರ ಪೂರೈಕೆ ಉದ್ಯೋಗಿ ದೀಪಂಕರ್ ಎಂಬುವವರು ಒಂದು ತಿಂಗಳ ಹಿಂದೆಯಷ್ಟೆ ಬಾಡಿಗೆಗೆ ಬಂದು ವಾಸಿಸುತ್ತಿದ್ದಾರೆ. ನನ್ನ ಹೆಸರು ಬೆಂಗಳೂರು ಮತದಾರರ ಪಟ್ಟಿಯಲ್ಲಿಲ್ಲ ಹಾಗೂ ಆ ವಿಳಾಸದಲ್ಲಿ ನೋಂದಣಿಯಾಗಿರುವ ಹೆಸರುಗಳನ್ನು ನಾನು ಗುರುತಿಸಲು ಸಾಧ್ಯವಿಲ್ಲ ಎಂದು ಆತ India Today ವರದಿಗಾರರಿಗೆ ತಿಳಿಸಿದ್ದಾರೆ.
ಈ ಮನೆ ಜಯರಾಮ್ ರೆಡ್ಡಿ ಎಂಬುವವರಿಗೆ ಸೇರಿದ್ದು, ಅವರು ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದಾರೆ ಎಂದು ದೀಪಂಕರ್ ತಿಳಿಸಿದ್ದಾರೆ. ಈ ಕುರಿತು ಜಯರಾಮ್ ರೆಡ್ಡಿಯನ್ನು ಸಂಪರ್ಕಿಸಿದಾಗ, ನನಗೆ ಬಿಜೆಪಿಯೊಂದಿಗೆ ಒಡನಾಟವಿರುವುದು ನಿಜ ಎಂದು ಆರಂಭದಲ್ಲಿ ಒಪ್ಪಿಕೊಂಡರೂ, ನಂತರ, ನಾನು ಕೇವಲ ಬಿಜೆಪಿಯ ಮತದಾರನಾಗಿದ್ದು, ಪಕ್ಷದ ಕಾರ್ಯಕರ್ತನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸದರಿ ವಿಳಾಸದ ಮನೆಯಲ್ಲಿ ಹಲವಾರು ಬಾಡಿಗೆದಾರರು ವಾಸಿಸುತ್ತಿದ್ದರು ಹಾಗೂ ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ, ಅವರಲ್ಲಿ ಬಹುತೇಕರು ಈಗ ಮನೆ ಖಾಲಿ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದಲ್ಲದೆ, ಕೆಲವರು ಚುನಾವಣೆಯ ವೇಳೆ ಮತ ಚಲಾಯಿಸಲು ಮರಳಿ ಬರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ನಾನು ಇದುವರೆಗೆ ಚುನಾವಣಾ ಪ್ರಾಧಿಕಾರಗಳಿಗೆ ಮಾಹಿತಿ ನೀಡಿಲ್ಲ ಹಾಗೂ ಮುಂದೆ ಮಾಡಲಿದ್ದೇನೆ ಎಂದೂ ಅವರು ಭರವಸೆ ನೀಡಿದ್ದಾರೆ. ನನ್ನ ಮನೆಯ ವಿಳಾಸದಲ್ಲಿ 80 ಮಂದಿ ಮತದಾರರು ನೋಂದಣಿಗೊಂಡಿದ್ದರೂ, ವಾಸ್ತವವಾಗಿ ಅವರಿಗೆಲ್ಲ ಅಲ್ಲಿ ವಾಸ್ತವ್ಯ ಕಲ್ಪಿಸಲು ಸಾಧ್ಯವಿಲ್ಲ ಎಂದು ಅವರು ದೃಢಪಡಿಸಿದ್ದಾರೆ. ಈ ಪೈಕಿ ಹಲವಾರು ಮಂದಿ ಒಡಿಶಾ, ಬಿಹಾರ ಹಾಗೂ ಮಂಡ್ಯ ಸೇರಿದಂತೆ ಇತರ ರಾಜ್ಯಗಳು ಅಥವಾ ಜಿಲ್ಲೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಈ ಪೈಕಿ ಕೆಲವರು ಮಾತ್ರ ಚುನಾವಣೆಯ ಸಂದರ್ಭದಲ್ಲಿ ಮತದಾನ ಮಾಡಲು ಮರಳಿ ಬರುತ್ತಾರೆ ಎಂದು India Todayಗೆ ಅವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮತಗಟ್ಟೆ ಅಧಿಕಾರಿ (ಬಿಎಲ್ಒ) ಮುನಿರತ್ನ, “ಐಟಿ ಕಾರಿಡಾರ್ ಸುತ್ತಮುತ್ತ ಸಣ್ಣ ಮನೆಗಳಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕರು ಮತದಾರರ ಗುರುತಿನ ಚೀಟಿ ಪಡೆಯಲು ಬಾಡಿಗೆ ಕರಾರು ಪತ್ರಗಳನ್ನು ಬಳಸಿಕೊಂಡಿದ್ದಾರೆ” ಎಂದು ದೃಢಪಡಿಸಿದ್ದಾರೆ. ಇಂತಹ ಮನೆಗಳಲ್ಲಿ ವಾಸಿಸುತ್ತಿರುವವರ ಪೈಕಿ ಭದ್ರತಾ ಸಿಬ್ಬಂದಿಗಳು, ಸ್ವಚ್ಛತಾ ಕಾರ್ಮಿಕರು ಅಥವಾ ಮನೆಗೆಲಸದವರು ಸೇರಿದ್ದಾರೆ. ಇಂಥವರೆಲ್ಲ ಮತದಾರರ ಗುರುತಿನ ಚೀಟಿ ಪಡೆದ ನಂತರ, ತಮ್ಮ ಸ್ಥಳಗಳನ್ನು ತೆರವುಗೊಳಿಸಿದರೂ, ಅವರ ಹೆಸರುಗಳು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಯುತ್ತಿವೆ.
ಸ್ಥಳಾಂತರಗೊಂಡಿರುವ ಮತದಾರರ ಹೆಸರುಗಳನ್ನು ಚುನಾವಣಾ ಆಯೋಗಕ್ಕೆ ರವಾನಿಸಲಾಗಿದೆ. ಆದರೆ, ಶಿಷ್ಟಾಚಾರದ ಕಾರಣಕ್ಕೆ ಅವರ ಹೆಸರುಗಳನ್ನು ಅಳಿಸಿ ಹಾಕುವುದು ಬಾಕಿ ಉಳಿಯುತ್ತಿದೆ ಎಂದು ಮುನಿರತ್ನ ಸ್ಪಷ್ಟನೆ ನೀಡಿದ್ದಾರೆ. ಯಾಕೆ ಎಂದು ಪ್ರಶ್ನಿಸಿದಾಗ, ಈ ಮತದಾರರ ಪೈಕಿ ಬಹುತೇಕರು ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದು ಹಾಕಲು ನಿರಾಕರಿಸುತ್ತಿದ್ದಾರೆ ಹಾಗೂ ನಮಗೆ ಈಗಲೂ ಮತದಾರರ ಗುರುತಿನ ಚೀಟಿ ಅಗತ್ಯವಿದೆ ಪ್ರತಿಪಾದಿಸುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಅವರೆಲ್ಲ ತಮ್ಮ ಮತ ಚಲಾಯಿಸಲು ಮರಳಿ ಬರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಗುರುವಾರ ಹೊಸ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮತದಾರರ ಪಟ್ಟಿಗೆ ನಕಲಿ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ತಮ್ಮ ಆರೋಪಕ್ಕೆ ಸಮರ್ಥನೆಯಾಗಿ ಕರ್ನಾಟಕ ಚುನಾವಣಾ ಮತಪಟ್ಟಿಯನ್ನು ಪ್ರದರ್ಶಿಸಿದ್ದರು.







