ಬೆಂಗಳೂರು ಇಸ್ಕಾನ್ ಪ್ರಕರಣ: ಪರಾಮರ್ಶನಾ ಅರ್ಜಿ ಬಗ್ಗೆ ಸುಪ್ರೀಂ ನ್ಯಾಯಮೂರ್ತಿಗಳ ಭಿನ್ನ ತೀರ್ಪು

ಹೊಸದಿಲ್ಲಿ: ಬೆಂಗಳೂರು ಇಸ್ಕಾನ್ ದೇವಾಲಯದ ನಿಯಂತ್ರಣವನ್ನು ತಮಗೆ ನೀಡಬೇಕು ಎಂದು ಕೋರಿ ಮುಂಬೈ ಇಸ್ಕಾನ್ ಸಲ್ಲಿಸಿದ್ದ ಅರ್ಜಿಯ ಸಂಬಂಧ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ಪೀಠ ನೀಡಿದ ತೀರ್ಪನ್ನು ಮರು ಪರಿಶೀಲನೆ ಮಾಡಬೇಕು ಎಂಬ ಮನವಿಯ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಭಿನ್ನ ತೀರ್ಪು ನೀಡಿದ್ದಾರೆ.
ನಿವೃತ್ತಿಗೆ ಒಂದು ವಾರ ಮೊದಲು ಅಂದರೆ ಮೇ 16ರಂದು ನ್ಯಾಯಮೂರ್ತಿ ಓಕಾ ನೇತೃತ್ವದ ಪೀಠ, ಕರ್ನಾಟಕ ಹೈಕೋರ್ಟ್ ತೀರ್ಪನ್ನು ಬದಿಗೊತ್ತಿ ಬೆಂಗಳೂರು ಇಸ್ಕಾನ್ ಪರ ತೀರ್ಪು ನೀಡಿತ್ತು. ಈ ತೀರ್ಪಿನ ಮರು ಪರಿಶೀಲನೆಗೆ ಕೋರಿ ಮುಂಬೈ ಇಸ್ಕಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಜಿ.ಮಸ್ಹಿ ಹಾಗೂ ನ್ಯಾಯಮೂರ್ತಿ ಮಹೇಶ್ವರಿ ಅವರು ಇದೀಗ ಭಿನ್ನ ತೀರ್ಪು ನೀಡಿದ್ದಾರೆ.
ಎರಡು ವಾಕ್ಯದ ತೀರ್ಪಿನಲ್ಲಿ ನ್ಯಾಯಮೂರ್ತಿ ಮಹೇಶ್ವರಿ ಅವರು ಮುಂಬೈ ಮನವಿಯನ್ನು ಪುರಸ್ಕರಿಸಿದ್ದು, ಮರು ಪರಿಶೀಲನೆ ಪ್ರಕರಣದ ವಿಚಾರಣೆಗೆ ದಿನಾಂಕ ನಿಗದಿಪಡಿಸಿ ಎರಡೂ ಕಡೆಯವರಿಗೆ ನೋಟಿಸ್ ನೀಡಿದ್ದಾರೆ. ಮೇ 16ರ ತೀರ್ಪಿನಲ್ಲಿ ಲೋಪ ಸಹಜವಾಗಿರುವುದರಿಂದ ಮರು ಪರಿಶೀಲನೆ ಮಾಡಬೇಕು ಎಂಬ ವಾದವನ್ನು ಎತ್ತಿಹಿಡಿದಿದ್ದಾರೆ.
ಆದರೆ ನ್ಯಾಯಮೂರ್ತಿ ಮಸ್ಹಿ ಇದನ್ನು ಅಲ್ಲಗಳೆದು ಮೂಲ ತೀರ್ಪಿನಲ್ಲಿ ಯಾವುದೇ ಲೋಪ ಇಲ್ಲ; ಆದ್ದರಿಂದ ಮರುಪರಿಶೀಲನೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿ, ಅರ್ಜಿ ವಜಾಗೊಳಿಸಿದ್ದಾರೆ. ಭಿನ್ನ ತೀರ್ಪಿನ ಹಿನ್ನೆಲೆಯಲ್ಲಿ ಇದೀಗ ಮರು ಪರಿಶೀಲನೆ ನಿರ್ಧಾರ ಸಿಜೆಐ ನಿರ್ದೇಶನವನ್ನು ಅವಲಂಬಿಸಿದೆ.







