ಕೇರಳದಲ್ಲಿ ಮುಂದುವರಿದ ‘ಭಾರತ ಮಾತಾ’ ವಿವಾದ: ರಾಜ್ಯಪಾಲರಿಂದ ಚಿತ್ರಕ್ಕೆ ಗೌರವಾರ್ಪಣೆ, ಸಿಪಿಐನಿಂದ ಪೋಸ್ಟರ್ ಹಿಂದೆಗೆತ

ರಾಜೇಂದ್ರ ವಿಶ್ವನಾಥ ಆರ್ಲೇಕರ್ | PC : PTI
ತಿರುವನಂತಪುರ: ರಾಜಭವನದಲ್ಲಿ ಗೋವಾ ದಿನಾಚರಣೆ ಸಂದರ್ಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಆರ್ಲೇಕರ್ ಅವರಿಂದ ‘ಭಾರತ ಮಾತಾ’ಚಿತ್ರಕ್ಕೆ ಗೌರವಾರ್ಪಣೆ ಮತ್ತು ಭಾರತ ಮಾತೆಯನ್ನು ತ್ರಿವರ್ಣ ಧ್ವಜದೊಂದಿಗೆ ತೋರಿಸಿದ್ದ ಚಿತ್ರವನ್ನು ಹೊಂದಿದ್ದ ಸ್ಥಳೀಯ ಪಕ್ಷದ ಕಾರ್ಯಕ್ರಮದ ಪೋಸ್ಟರ್ ಅನ್ನು ಸಿಪಿಐ ಹಿಂದೆಗೆದುಕೊಳ್ಳುವುದರೊಂದಿಗೆ ಕೇರಳದಲ್ಲಿ ‘ಭಾರತ ಮಾತಾ’ ವಿವಾದವು ಮುಂದುವರಿದಿದೆ.
ಸಿಪಿಐ ನಾಯಕ ಹಾಗೂ ರಾಜ್ಯದ ಕೃಷಿ ಸಚಿವ ಪಿ. ಪ್ರಸಾದ್ ಅವರು ಭಾರತ ಮಾತೆಯ ಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸುವುದನ್ನು ತಪ್ಪಿಸಲು ಕಳೆದ ವಾರ ಇಲ್ಲಿಯ ರಾಜಭವನದಲ್ಲಿ ನಡೆದ ಪರಿಸರ ದಿನಾಚರಣೆಯನ್ನು ಬಹಿಷ್ಕರಿಸಿದ್ದರು. ಸೋಮವಾರ ರಾಜಭವನದಲ್ಲಿ ಆಯೋಜಿಸಲಾಗಿದ್ದ ಗೋವಾ ದಿನಾಚರಣೆಯಲ್ಲಿ ಆರ್ಲೇಕರ್ ಅವರು ಭಾರತ ಮಾತೆಯ ಅದೇ ಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿದರು.
‘ಏಕ ಭಾರತ ಶ್ರೇಷ್ಠ ಭಾರತ’ ಉಪಕ್ರಮದ ಅಂಗವಾಗಿ ರಾಜಭವನದಲ್ಲಿ ಗೋವಾ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು ಎಂದು ರಾಜ್ಯಪಾಲರ ಕಚೇರಿಯು ತಿಳಿಸಿದೆ.
ಅದೇ ದಿನ ಸಿಪಿಐ ಇಲ್ಲಿ ಜೂ.13ರಿಂದ 15ರವರೆಗೆ ನಡೆಯಲಿರುವ ಸ್ಥಳೀಯ ಪಕ್ಷದ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪೋಸ್ಟರ್ವೊಂದನ್ನು ಹಿಂದೆಗೆದುಕೊಂಡಿದೆ. ಈ ಪೋಸ್ಟರ್ ತ್ರಿವರ್ಣ ಸೀರೆಯನ್ನು ಧರಿಸಿದ್ದ, ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದಿದ್ದ ಭಾರತ ಮಾತೆಯ ಚಿತ್ರವನ್ನು ಒಳಗೊಂಡಿತ್ತು.
ಪೋಸ್ಟರ್ ಕುರಿತು ಮಾಹಿತಿ ಸ್ವೀಕರಿಸಿದ ತಕ್ಷಣ ‘ಅನಗತ್ಯ ವಿವಾದ’ವನ್ನು ತಪ್ಪಿಸಲು ಅದನ್ನು ಸಾಮಾಜಿಕ ಮಾಧ್ಯಮಗಳಿಂದ ಹಿಂದೆಗೆದುಕೊಳ್ಳುವಂತೆ ಸೂಚಿಸಲಾಗಿತ್ತು ಎಂದು ತಿಳಿಸಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಬಿ.ಬಿನು ಅವರು,ಪಕ್ಷದ ಕಾರ್ಯಕ್ರಮಗಳು ಅಥವಾ ಚಿಹ್ನೆಗಳೊಂದಿಗೆ ರಾಷ್ಟ್ರಧ್ವಜವನ್ನು ಸಂಯೋಜಿಸುವುದು ಸರಿಯಲ್ಲ ಎಂದರು.
ಕೇರಳದ ಆಡಳಿತಾರೂಢ ಎಲ್ಡಿಎಫ್ನಲ್ಲಿ ಎರಡನೇ ಅತಿ ದೊಡ್ಡ ಪಾಲುದಾರನಾಗಿರುವ ಸಿಪಿಐ ರಾಜಭವನದಲ್ಲಿ ಭಾರತ ಮಾತೆಯ ಚಿತ್ರದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮೊದಲಿಗನಾಗಿತ್ತು.
ಸಂವಿಧಾನ ಅಥವಾ ಭಾರತ ಸರಕಾರದ ಪ್ರಕಾರ ‘ಭಾರತ ಮಾತೆ’ಯ ಅಧಿಕೃತ ಆವೃತ್ತಿಯಿಲ್ಲ ಮತ್ತು ಕಾರ್ಯಕ್ರಮದಲ್ಲಿಯ ಚಿತ್ರ ಆರೆಸ್ಸೆಸ್ ವ್ಯಾಪಕವಾಗಿ ಬಳಸುತ್ತಿರುವುದಾಗಿತ್ತು ಎಂದು ರಾಜಭವನದಲ್ಲಿಯ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದ ಸಂದರ್ಭ ಪ್ರಸಾದ ಹೇಳಿದ್ದರು. ಇದರ ಬೆನ್ನಲ್ಲೇ ಸಿಪಿಐ ರಾಷ್ಟ್ರಧ್ವಜಾರೋಹಣ ಮತ್ತು ಅದರ ಮುಂದೆ ಸಸಿಗಳನ್ನು ನೆಡುವ ತನ್ನ ಅಭಿಯಾನವನ್ನು ಪ್ರಕಟಿಸಿತ್ತು.
ಜೂ.7ರಂದು ಸಿಪಿಐ ತನ್ನ ಎಲ್ಲ ಶಾಖೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಸಸಿಗಳನ್ನು ನೆಟ್ಟಿದ್ದಲ್ಲದೆ,‘ಭಾರತ ಮಾತಾ ಕಿ ಜೈ’ ಘೋಷಣೆಗಳನ್ನೂ ಕೂಗಿತ್ತು.
ಮರುದಿನವೇ ಎಡಪಕ್ಷವನ್ನು ಟೀಕಿಸಿದ್ದ ಆರ್ಲೇಕರ್,‘ಭಾರತ ಮಾತೆಯ ಬಗ್ಗೆ ಎಂದೂ ಯೋಚಿಸದವರು ‘ಭಾರತ ಮಾತಾ ಕಿ ಜೈ’ ಹೇಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ,ನಾನು ಇದನ್ನು ಮೆಚ್ಚುತ್ತೇನೆ’ ಎಂದು ಹೇಳಿದ್ದರು. ಅದೇ ದಿನ ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಅವರು,ಸಂವಿಧಾನದಲ್ಲಿ ಭಾರತ ಮಾತೆಯ ಉಲ್ಲೇಖವಿಲ್ಲ,ಹೀಗಾಗಿ ಅದರ ಪರಿಕಲ್ಪನೆಯೇ ಇಲ್ಲ ಎಂದು ಹೇಳಿದ್ದರು.