ಅಸ್ಸಾಂನಲ್ಲಿ ಭಾರತ್ ನ್ಯಾಯ ಯಾತ್ರೆಗೆ ಬಿಜೆಪಿ ಸರಕಾರದಿಂದ ಅಡ್ಡಿ: ಜೈರಾಮ್ ರಮೇಶ್

ಜೈರಾಮ್ ರಮೇಶ್ | Photo: PTI
ಮೌಲಿ (ಅಸ್ಸಾಂ : ಅಸ್ಸಾಂನಲ್ಲಿ ನಡೆಯುತ್ತಿರುವ ಭಾರತ್ ನ್ಯಾಯಯಾತ್ರೆಗೆ ಅಲ್ಲಿನ ಹಿಮವಂತ ಬಿಶ್ವ ಶರ್ಮಾ ನೇತೃತ್ವದ ಬಿಜೆಪಿ ಸರಕಾರವು ಅಡ್ಡಿಪಡಿಸುತ್ತಿದೆಯೆಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆಪಾದಿಸಿದ್ದಾರೆ.
ಮೌಲಿಗೆ ಆಗಮಿಸಿದ ‘ಭಾರತ್ ನ್ಯಾಯ ಯಾತ್ರೆ’ಯಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ‘‘ಈ ಎರಡು ದಿನಗಳಲ್ಲಿ ನಾವು ಅಸ್ಸಾಂನಲ್ಲಿ ಎದುರಿಸಿದಷ್ಟು ಸಮಸ್ಯೆಗಳನ್ನು ಬೇರೆಲ್ಲೂ ಎದುರಿಸಿರಲಿಲ್ಲ. ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ನಡೆದ ಕಾಂಗ್ರೆಸ್ ಪಕ್ಷದ ಚೊಚ್ಚಲ ‘ಭಾರತ್ ಜೋಡೋ ಯಾತ್ರೆಯು ಬಿಜೆಪಿ ಆಳ್ವಿಕೆಯ ರಾಜ್ಯಗಳನ್ನು ಹಾದುಹೋದಾಗಲೂ ಈ ಭಾರತ್ ನ್ಯಾಯ ಯಾತ್ರೆಯ ಸಂದರ್ಭ ಅಸ್ಸಾಂನಲ್ಲಿ ಏದುರಿಸುತ್ತಿರುವಷ್ಟು ಸಮಸ್ಯೆಗಳನ್ನು ಅನುಭವಿಸಿರಲಿಲ್ಲ’’ ಎಂದವರು ಹೇಳಿದ್ದಾರೆ.
‘ ಭಾರತ್ ಜೋಡೋ ಯಾತ್ರೆ’ಯು ಬಿಜೆಪಿ ಆಳ್ವಿಕೆಯ ರಾಜ್ಯಗಳಾದ ಕರ್ನಾಟಕ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರಗಳನ್ನು ಹಾದುಹೋಗಿತ್ತು . ಅಲ್ಲದೆ ಅಲ್ಲಿನ ಸರಕಾರದ ಮುಖ್ಯಮಂತ್ರಿಗಳನ್ನು ಹಾಗೂ ಸರಕಾರಗಳನ್ನು ಕಾಂಗ್ರೆಸ್ ಟೀಕಿಸಿದ್ದರೂ ಯಾವುದೇ ಸಮಸ್ಯೆಗಳಾಗಿರಲಿಲ್ಲ ಎಂದವರು ಹೇಳಿದರು.
‘‘ಆದರೆ ಇದೇ ಮೊದಲ ಬಾರಿಗೆ ಕಳೆದ 24 ತಾಸುಗಳಲ್ಲೇ ಕಾಂಗ್ರೆಸ್ ನ ಯಾತ್ರೆಯ ಬಗ್ಗೆ ಅಸ್ಸಾಂ ಮುಖ್ಯಮಂತ್ರಿಯವರಿಗೆ ಇರಿಸುಮುರಿಸಾಗಿದೆ. ನಮ್ಮ ವಿರುದ್ಧ ಎಫ್ಐಆರ್ ದಾಖಲಿಸುವ, ಜೈಲಿಗೆ ತಳ್ಳುವ ಬೆದರಿಕೆಯನ್ನು ಅವರು ಒಡ್ಡಿದ್ದಾರೆ. ಭಾರತ್ ನ್ಯಾಯ ಯಾತ್ರಾದಲ್ಲಿ ಪಾಲ್ಗೊಳ್ಳದಂತೆ ಜನರನ್ನು ತಡೆಯಲಾಗುತ್ತದೆ ’ ಎಂದು ಜೈರಾಮ್ ರಮೇಶ್ ಆಪಾದಿಸಿದರು.
ಆದಾಗ್ಯೂ, ಅಸ್ಸಾಂನಲ್ಲಿ ನಿಗದಿಯಾದಂತೆ ನಡೆಯಲಿರುವ ಮುಂದಿನ ಆರು ದಿನಗಳ ಯಾತ್ರೆಯನ್ನು ತಡೆಯಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲವೆಂದು ಅವರು ಹೇಳಿದರು.
ರಾಹುಲ್ ನೇತೃತ್ವದ ಭಾರತ್ ನ್ಯಾಯ ಯಾತ್ರಾ, ಜನವರಿ 25ರವರೆಗೆ ಅಸ್ಸಾಂನಲ್ಲಿ ಸಂಚರಿಸಲಿದ್ದು, 17 ಜಿಲ್ಲೆಗಳಲ್ಲಿ 833 ಕಿ.ಮೀ. ದೂರವನ್ನು ಕ್ರಮಿಸಲಿದೆ.







