ಸಾವರ್ಕರ್ ಗೆ ಭಾರತರತ್ನ ನೀಡಿದರೆ ಪ್ರಶಸ್ತಿಯ ಘನತೆ ಹೆಚ್ಚಲಿದೆ: ಮೋಹನ್ ಭಾಗ್ವತ್

ಮೋಹನ್ ಭಾಗ್ವತ್ (Photo : PTI) ವಿ.ಡಿ.ಸಾವರ್ಕರ್ (Photo : newindianexpress.com)
ಹೊಸದಿಲ್ಲಿ: ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಸಮಾನ ನಾಗರಿಕ ಸಂಹಿತೆಯನ್ನು ರೂಪಿಸಬೇಕು ಹಾಗೂ ಅದು ವಿಭಜನೆಗಳಿಗೆ ಕಾರಣವಾಗಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವರಿಷ್ಠ ಮೋಹನ್ ಭಾಗವತ್ ಹೇಳಿದ್ದಾರೆ.
ಆರೆಸ್ಸೆಸ್ ಶತಮಾನೋತ್ಸವದ ಆಂಗವಾಗಿ ಮುಂಬೈನಲ್ಲಿ ರವಿವಾರ ನಡೆದ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಆನಂತರ ಆರೆಸ್ಸೆಸ್ ಗೆ ಅಚ್ಚೇ ದಿನ್ (ಸುದಿನಗಳು) ಬಂದಿದೆಯೇ ಎಂಬ ಪ್ರಶ್ನೆಗೆ, ಆರೆಸ್ಸೆಸ್ ‘ಅಚ್ಚೇ ದಿನ್’ ಬಿಜೆಪಿಯಿಂದಾಗಿ ಬಂದುದಲ್ಲ. ಸಂಘದ ಕಾರ್ಯಕರ್ತರ ಕಠಿಣ ಪರಿಶ್ರಮ ಹಾಗೂ ಸೈದ್ಧಾಂತಿಕ ನೀತಿಗಳ ಬದ್ಧತೆಯಿಂದಾಗಿ ಬಂದಿದೆ ಎಂದರು.
ಅಯೋಧ್ಯೆಯ ರಾಮದೇಗುಲ ನಿರ್ಮಾಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತನ್ನ ಬದ್ದತೆಯನ್ನು ಉಳಿಸಿಕೊಂಡಿತ್ತು ಹಾಗೂ ಈ ಚಳವಳಿಯನ್ನು ಬೆಂಬಲಿಸಿದವರಿಗೆ ಇದರಿಂದ ಪ್ರಯೋಜನವಾಗಿದೆ. ಹಿಂದುತ್ವದ ಪ್ರತಿಪಾದಕ ವಿ.ಡಿ. ಸಾವರ್ಕರ್ ಅವರಿಗೆ ಭಾರತರತ್ನ ಪುರಸ್ಕಾರ ನೀಡಬೇಕೆಂಬ ದೀರ್ಘಕಾಲದಿಂದ ನನೆಗುದಿಯಲ್ಲಿರುವ ಬೇಡಿಕೆ ಕುರಿತು ಪ್ರಸ್ತಾವಿಸಿದ ಅವರು ‘‘ಒಂದು ವೇಳೆ ಅದನ್ನು ಸಾವರ್ಕರ್ ಅವರಿಗೆ ಪ್ರದಾನ ಮಾಡಿದಲ್ಲಿ ಪ್ರಶಸ್ತಿಯ ಘನತೆ ಹೆಚ್ಚಲಿದೆ’’ ಎಂದರು.
‘‘ಉತ್ತರಾಖಂಡದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಮುನ್ನ ಮೂರು ಲಕ್ಷ ಸಲಹೆಗಳನ್ನು ಸ್ವೀಕರಿಸಲಾಗಿತ್ತು ಹಾಗೂ ಸಂಬಂಧಪಟ್ಟವರ ಜೊತೆಗೆ ಮಾತುಕತೆಗಳನ್ನು ನಡೆಸಿದ ಬಳಿಕ ಸಮಾನಾಗರಿಕ ಸಂಹಿತೆ ಕಾಯ್ದೆಯನ್ನು ಅಂಗೀಕರಿಸಲಾಯಿತು. ದೇಶದಲ್ಲಿ ಬಹುಸಂಖ್ಯಾತರು ಅಥವಾ ಅಲ್ಪಸಂಖ್ಯಾತರು ಎಂಬುದಿಲ್ಲ. ನಾವೆಲ್ಲರೂ ಒಂದೇ ಸಮಾಜವಾಗಿದ್ದೇವೆ ಎಂದವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಗಳ ಜೊತೆ ವಿಶ್ವಾಸ, ಸ್ನೇಹ ಹಾಗೂ ಸಂವಾದದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಧರ್ಮದಲ್ಲಿ ಅಧ್ಯಾತ್ಮಿಕತೆ ಇಲ್ಲದೆ ಇದ್ದಲ್ಲಿ ಅದು ಪ್ರಾಬಲ್ಯ ಸಾಧಿಸಲು ಬಯಸುತ್ತದೆ ಹಾಗೂ ಅಕ್ರಮಣಕಾರಿಯಾಗಿರುತ್ತದೆ. ‘‘ಈಗ ಕಾಣುತ್ತಿರುವ ಕ್ರೈಸ್ತ ಧರ್ಮವಾಗಲಿ ಅಥವಾ ಇಸ್ಲಾಂ ಧರ್ಮವಾಗಲಿ, ಯೇಸುಕ್ರಿಸ್ತ ಹಾಗೂ ಪ್ರವಾದಿ ಮುಹಮ್ಮದರ ಬೋಧನೆಯ ಪ್ರಕಾರ ಇಲ್ಲ. ನಮಗೆ ನೈಜ ಇಸ್ಲಾಂ ಹಾಗೂ ಕ್ರೈಸ್ತಧರ್ಮದ ಆಚರಣೆಯ ಅಗತ್ಯವಿದೆ ’’ಎಂದು ಅವರು ಹೇಳಿದರು.
ಇತ್ತೀಚಿನ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಒಪ್ಪಂದವನ್ನು ವಿವರವಾಗಿ ಪರಿಶೀಲಿಸಿಲ್ಲ ಎಂದರು. ‘‘ನಾವು ಏಕಾಂಗಿಯಾಗಿ ಉಳಿದುಕೊಳ್ಳಲು ಸಾಧ್ಯವಿಲ್ಲವೆಂಬುದು ನಿಜ. ವ್ಯಾಪಾರದಲ್ಲಿ ಕೊಡುಕೊಳ್ಳುವಿಕೆ ಎರಡೂ ಇರುತ್ತದೆ. ಇಬ್ಬರಿಗೂ ಲಾಭವಾಗಬೇಕೇ ಹೊರತು ನಷ್ಟವಾಗಕೂಡದು ಎಂದರು.







