ವಾರಕ್ಕೆ 90 ಗಂಟೆಯ ಕೆಲಸಕ್ಕಿಂತ ಕೆಲಸದ ಗುಣಮಟ್ಟ ಮುಖ್ಯ: ಭಾರತ್ ಪೇ ಸಿಇಒ

ಭಾರತ್ ಪೇ ಸಿಇಒ ನಳಿನ್ ನೇಗಿ | PC : X/@bharatpeindia
ಹೊಸದಿಲ್ಲಿ: ದೇಶದ ಪ್ರಗತಿಗಾಗಿ ಪ್ರತಿಯೊಬ್ಬ ಉದ್ಯೋಗಿಯೂ ವಾರಕ್ಕೆ 70 ಗಂಟೆ ಕಾಲ ದುಡಿಯಬೇಕು ಎಂದು ಹೇಳಿಕೆ ನೀಡುವ ಮೂಲಕ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ನಾರಾಯಣಮೂರ್ತಿ ಕೆಲಸ ಮತ್ತು ಜೀವನ ಸಮತೋಲನದ ಕುರಿತ ಚರ್ಚೆಗೆ ನಾಂದಿ ಹಾಡಿದರು.
“ಎಷ್ಟೂ ಅಂತ ನಿಮ್ಮ ಪತ್ನಿಯರ ಮುಖವನ್ನೇ ದಿಟ್ಟಿಸುತ್ತಾ ಕೂರುತ್ತೀರಿ? ವಾರಕ್ಕೆ 90 ಗಂಟೆ ಕೆಲಸ ಮಾಡಿ” ಎಂದು ತಮ್ಮ ಉದ್ಯೋಗಿಗಳಿಗೆ ತಾಕೀತು ಮಾಡುವ ಎಲ್ ಆ್ಯಂಡ್ ಟಿ ಮುಖ್ಯಸ್ಥ ಎಸ್.ಎನ್.ಸುಬ್ರಮಣ್ಯನ್ ಈ ಚರ್ಚೆಯನ್ನು ಮತ್ತಷ್ಟು ವಿಸ್ತರಿಸಿದರು. ಈ ಹೇಳಿಕೆಗಳಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಪರ ಮತ್ತು ವಿರೋಧ ಪ್ರತಿಕ್ರಿಯೆಗಳೆರಡೂ ವ್ಯಕ್ತವಾದವು.
ಇದೀಗ ಈ ಚರ್ಚೆಗೆ ದುಮುಕಿರುವ ಭಾರತ್ ಪೇ ಸಿಇಒ ನಳಿನ್ ನೇಗಿ, ವಾರಕ್ಕೆ 90 ಗಂಟೆ ಕೆಲಸಕ್ಕಿಂತ ಕೆಲಸದ ಗುಣಮಟ್ಟ ಮುಖ್ಯ ಎಂದು ಹೇಳುವ ಮೂಲಕ ಕೆಲಸ ಮತ್ತು ಜೀವನ ಸಮತೋಲನ ಕುರಿತ ಚರ್ಚೆಗೆ ಹೊಸ ದಿಕ್ಕು ತೋರಿದ್ದಾರೆ.
PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಭಾರತ್ ಪೇ ಸಿಇಒ ನಳಿನ್ ನೇಗಿ, “ಕೆಲಸದ ಗುಣಮಟ್ಟ ಮಾನದಂಡವೇ ಹೊರತು ಕೆಲಸದ ಅವಧಿಯಲ್ಲ” ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
“90 ಗಂಟೆಗಳ ಕಾಲ ಕೆಲಸ ತುಂಬಾ ದೀರ್ಘಾವಧಿಯದ್ದಾಗಿದ್ದು, ಇದು ತುಂಬಾ ಕಠಿಣವಾಗಲಿದೆ. ಹೀಗಾಗಿ, ಕೆಲಸದ ಗುಣಮಟ್ಟ ಮಾತ್ರ ಮುಖ್ಯವಾಗಬೇಕು” ಎಂದು ಅವರು ಪ್ರತಿಪಾದಿಸಿದ್ದಾರೆ.
ಕೆಲಸ-ಜೀವನ ಸಮತೋಲನ ಕುರಿತು ಚರ್ಚೆ ಮೊದಲಿನಿಂದಲೂ ಚಾಲ್ತಿಯಲ್ಲಿದ್ದು, ಭಾರತ್ ಪೇ ಇನ್ನೂ ಸಣ್ಣ ವಯಸ್ಸಿನ ಸಂಸ್ಥೆಯಾಗಿ ತನ್ನ ಉದ್ಯೋಗಿಗಳಿಗೆ ಆರಾಮದಾಯಕ ವಾತಾವರಣ ಹಾಗೂ ಅವರು ತಮ್ಮ ಅತ್ಯುತ್ತಮವನ್ನು ನೀಡುವಂಥ ವೇದಿಕೆಯನ್ನು ಸೃಷ್ಟಿಸಲು ಬಯಸುತ್ತದೆ ಎಂದು ನಳಿನ್ ನೇಗಿ ಹೇಳಿದ್ದಾರೆ.
“ಸಣ್ಣ ವಯಸ್ಸಿನ ಸಂಸ್ಥೆಗಳು ವೃತ್ತಿ ಜೀವನದ ಭವಿಷ್ಯವನ್ನು ತುಂಬಾ ತುಂಬಾ ವಿಭಿನ್ನವಾಗಿ ರೂಪಿಸುತ್ತವೆ. ಯಾಕೆಂದರೆ, ನಿಮ್ಮ ಬಳಿ ವಿಭಿನ್ನ ಜನರಿರುತ್ತಾರೆ. ಬೃಹತ್ ಸಂಸ್ಥೆಗಳು ದೀರ್ಘಕಾಲದ ನಂತರವೇ ದೊಡ್ಡ ಸಂಸ್ಥೆಗಳಾಗಿವೆ. ಅವರ ಬಳಿ ಜನರಿದ್ದಾರೆ ಹಾಗೂ ತಮಗೆ ಒಗ್ಗುವಂತಹ ವ್ಯಕ್ತಿತ್ವದ ಪ್ರತಿಭೆಗಳನ್ನೇ ಆಕರ್ಷಿಸುತ್ತವೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆರು ವರ್ಷ ವಯೋಮಾನದ ಭಾರತ್ ಪೇ ಸಂಸ್ಥೆಯು ಕರ್ಮಠವಲ್ಲದ ವೃತ್ತಿ ಸಂಸ್ಕೃತಿಯನ್ನು ನಿರ್ಮಿಸಲು ಬಯಸುತ್ತದೆ ಎಂದೂ ಅವರು ಹೇಳಿದ್ದಾರೆ.







