ಡ್ರೋನ್ ನಿಗ್ರಹ ವ್ಯವಸ್ಥೆ ‘ಭಾರ್ಗವಾಸ್ತ್ರ’ದ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

PC : ANI
ಹೊಸದಿಲ್ಲಿ: ಭಾರತದ ಸ್ವದೇಶಿ ನಿರ್ಮಿತ, ಕಡಿಮೆ ವೆಚ್ಚದ ಡ್ರೋನ್ ನಿಗ್ರಹ ವ್ಯವಸ್ಥೆ ‘ಭಾರ್ಗವಾಸ್ತ್ರ’ದ ಪ್ರಾಯೋಗಿಕ ಪರೀಕ್ಷೆಯನ್ನು ಮಂಗಳವಾರ ಒಡಿಶಾದ ಗೋಪಾಲ್ಪುರದಲ್ಲಿರುವ ಸೀವಾರ್ಡ್ ಫೈರಿಂಗ್ ರೇಂಜ್ ನಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ‘ಆಪರೇಶನ್ ಸಿಂಧೂರ’ ಕಾರ್ಯಾಚರಣೆಯ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ಸೋಲಾರ್ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಲಿಮಿಟೆಡ್ (ಎಸ್ಡಿಎಎಲ್) ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿರುವ ಭಾರ್ಗವಾಸ್ತ್ರವು ಡ್ರೋನ್ ಸುರಿಮಳೆಯನ್ನು ಎದುರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಈ ಡ್ರೋನ್ ನಿಗ್ರಹ ವ್ಯವಸ್ಥೆಯಲ್ಲಿ ಬಳಸಲಾಗಿರುವ ಮೈಕ್ರೋ ರಾಕೆಟ್ಗಳನ್ನು ಗೋಪಾಲಪುರದಲ್ಲಿ ಕಠಿಣ ಪರೀಕ್ಷೆಗೆ ಒಳಪಡಿಸಲಾಯಿತು. ಆರ್ಮಿ ಏರ್ ಡಿಫೆನ್ಸ್ (ಎಎಡಿ)ನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ರಾಕೆಟ್ ಗೆ ಮೂರು ಪರೀಕ್ಷೆಗಳನ್ನು ನಡೆಸಲಾಯಿತು.
ಎರಡು ಸೆಕೆಂಡ್ಗಳ ಅಂತರದಲ್ಲಿ ಎರಡು ರಾಕೆಟ್ಗಳನ್ನು ಸಾಲ್ವೊ ಸ್ಥಿತಿಯಲ್ಲಿ ಉಡಾಯಿಸುವ ಮೂಲಕ ಒಂದು ಪ್ರಯೋಗವನ್ನು ನಡೆಸಲಾಯಿತು. ಎಲ್ಲಾ ನಾಲ್ಕು ರಾಕೆಟ್ಗಳು ನಿರೀಕ್ಷೆಯಂತೆ ನಿರ್ವಹಣೆ ನೀಡಿವೆ ಮತ್ತು ಉಡಾವಣೆಗೆ ಅಗತ್ಯವಾಗಿರುವ ಮಾನದಂಡಗಳನ್ನು ಗಳಿಸಿವೆ ಎಂದು ವರದಿಯೊಂದು ತಿಳಿಸಿದೆ.