ಭೀಮಾ ಕೋರೆಗಾಂವ್ ಪ್ರಕರಣ | ಮಾಜಿ ಪ್ರಾದ್ಯಾಪಕಿ ಶೋಮಾ ಸೇನ್ ಕಾರಾಗೃಹದಿಂದ ಬಿಡುಗಡೆ
PC : Indira Jaisingh/X
ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದುಕೊಂಡ ದಿನಗಳ ಬಳಿಕ ನಾಗಪುರ ವಿಶ್ವವಿದ್ಯಾನಿಲಯದ ಮಾಜಿ ಪ್ರಾದ್ಯಾಪಕಿ ಶೋಮಾ ಸೇನ್ ಬುಧವಾರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
ಅವರು 2018 ಜೂನ್ 6ರಿಂದ ಕಾರಾಗೃಹದಲ್ಲಿ ಇದ್ದರು. ಅವರು ಕಾರಾಗೃಹದಿಂದ ಬಿಡುಗಡೆಯಾದ ವಿಚಾರವನ್ನು ಅವರ ವಕೀಲ ಇಂದಿರಾ ಜೈಸಿಂಗ್ ‘ಎಕ್ಸ್’ನಲ್ಲಿ ದೃಢಪಡಿಸಿದ್ದಾರೆ.
ಪುಣೆ ಸಮೀಪದ ಭೀಮಾ ಕೋರೆಗಾಂವ್ನಲ್ಲಿ 2018 ಜನವರಿಯಲ್ಲಿ ನಡೆದ ಜಾತಿ ಹಿಂಸಾಚಾರವನ್ನು ಉತ್ತೇಜಿಸಿದ ಆರೋಪದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾದ 16 ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು ಹಾಗೂ ವಕೀಲರಲ್ಲಿ ಸೇನ್ ಅವರು ಕೂಡ ಒಳಗೊಂಡಿದ್ದಾರೆ.
ಸೇನ್ ಅವರಿಗೆ ಎಪ್ರಿಲ್ 5ರಂದು ಜಾಮೀನು ಮಂಜೂರು ಮಾಡುವ ಸಂದರ್ಭ ಸುಪ್ರೀಂ ಕೋರ್ಟ್, ಅವರ ವಿರುದ್ಧದ ಭಯೋತ್ಪಾದನೆಯ ಆರೋಪ ಮೇಲ್ನೋಟಕ್ಕೆ ಅಸತ್ಯ ಎಂದು ಅಭಿಪ್ರಾಯಿಸಿದೆ.
Next Story