ಭೋಪಾಲ: ಯುವತಿಯನ್ನು ಕೊಂದು ಏನೂ ಆಗಿಲ್ಲವೆಂಬಂತೆ ಎರಡು ದಿನ ಶವದ ಪಕ್ಕವೇ ಮಲಗಿದ್ದ ಲಿವ್ ಇನ್ ಸಂಗಾತಿ!

ಸಾಂದರ್ಭಿಕ ಚಿತ್ರ
ಭೋಪಾಲ(ಮಧ್ಯಪ್ರದೇಶ): ಬೆನ್ನುಹುರಿಯಲ್ಲಿ ಚಳಿ ಮೂಡಿಸುವ ಅಪರಾಧವೊಂದು ಭೋಪಾಲ ನಗರವನ್ನು ದಿಗ್ಭ್ರಮೆಗೊಳಿಸಿದೆ. ಲಿವ್ ಇನ್ ಸಂಗಾತಿ 29ರ ಹರೆಯದ ಯುವತಿಯನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ಇಲ್ಲಿಯ ಗಾಯತ್ರಿ ನಗರದಲ್ಲಿ ನಡೆದಿದೆ. ಆರೋಪಿ ಸಚಿನ್ ರಾಜಪೂತ್(32) ತನ್ನ ಸಂಗಾತಿ ರಿತಿಕಾ ಸೇನ್ ಳನ್ನು ಕೊಂದಿದ್ದು ಮಾತ್ರವಲ್ಲ, ಶವವನ್ನು ಕಂಬಳಿಯಲ್ಲಿ ಸುತ್ತಿ ಎರಡು ರಾತ್ರಿ ಅದರ ಪಕ್ಕದಲ್ಲಿಯೇ ಏನೂ ಆಗಿಲ್ಲವೆಂಬಂತೆ ಮಲಗಿದ್ದ!
ಜು.27ರಂದು ಈ ಜೋಡಿಯ ನಡುವೆ ತೀವ್ರ ಜಗಳದ ಬಳಿಕ ಕೊಲೆ ನಡೆದಿದೆ. ನಿರುದ್ಯೋಗಿಯಾಗಿದ್ದು ಅಸೂಯೆಯಿಂದ ಕುದಿಯುತ್ತಿದ್ದ ಸಚಿನ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಿತಿಕಾ ತನ್ನ ಬಾಸ್ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ. ಇದೇ ವಿಷಯದಲ್ಲಿ ಆರಂಭಗೊಂಡಿದ್ದ ಜಗಳ ಹಿಂಸಾರೂಪಕ್ಕೆ ತಿರುಗಿದ್ದು,ಆತ ರಿತಿಕಾಳನ್ನು ಕತ್ತು ಹಿಸುಕಿ ಕೊಂದಿದ್ದ.
ಆದರೆ ಕೊಲೆಯ ನಂತರ ನಡೆದಿದ್ದು ಇನ್ನೂ ಘೋರ. ರಿತಿಕಾಳ ಶವವನ್ನು ಎಚ್ಚರಿಕೆಯಿಂದ ಬ್ಲಾಂಕೆಟ್ನಲ್ಲಿ ಸುತ್ತಿದ್ದ ಸಚಿನ್ ಅದನ್ನು ಹಾಸಿಗೆಯ ಮೇಲಿರಿಸಿ ಅದೇ ರೂಮಿನಲ್ಲಿ ಉಳಿದುಕೊಂಡಿದ್ದ. ಪೋಲಿಸರು ತಿಳಿಸಿರುವಂತೆ ಆತ ಎರಡು ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಮದ್ಯ ಸೇವಿಸುತ್ತ ಶವದ ಪಕ್ಕದಲ್ಲಿಯೇ ಮಲಗಿದ್ದ.
ರವಿವಾರ ಮದ್ಯದ ನಶೆಯಲ್ಲಿಯೇ ಇದ್ದ ಸಚಿನ್ ಮಿಸ್ರೋಡ್ ನಲ್ಲಿರುವ ತನ್ನ ಸ್ನೇಹಿತ ಅನುಜ್ ಗೆ ಕರೆ ಮಾಡಿ ತಾನು ಕೊಲೆ ಮಾಡಿದ್ದನ್ನು ಹೇಳಿಕೊಂಡಿದ್ದ. ಅನುಜ್ ಆತನನ್ನು ನಂಬಿರಲಿಲ್ಲ. ಆದರೆ ಮರುದಿನವೂ ಬೆಳಿಗ್ಗೆ ಸಚಿನ್ ಅದನ್ನೇ ಪುನರುಚ್ಚರಿಸಿದ್ದು,ಆತ ತಮಾಷೆ ಮಾಡುತ್ತಿಲ್ಲ ಎನ್ನುವುದು ಅರಿವಾದಾಗ ಅನುಜ್ ಪೋಲಿಸರಿಗೆ ಮಾಹಿತಿ ನೀಡಿದ್ದ.
ಪೋಲಿಸರು ಸಚಿನ್ ಮತ್ತು ರಿತಿಕಾ ವಾಸವಿದ್ದ ಬಾಡಿಗೆ ಮನೆಯನ್ನು ತಲುಪಿದಾಗ ಬ್ಲಾಂಕೆಟ್ನಲ್ಲಿ ಸುತ್ತಿಟ್ಟಿದ್ದ ರಿತಿಕಾಶ ಶವವು ಕೊಳೆಯತೊಡಗಿತ್ತು. ಇಬ್ಬರೂ ಮೂರೂವರೆ ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿದ್ದರು ಎಂದು ಪೋಲಿಸರು ತಿಳಿಸಿದರು.
ವಿದಿಶಾ ಮೂಲದ ಸಚಿನ್ ಗೆ ಮದುವೆಯಾಗಿದ್ದು ಎರಡು ಮಕ್ಕಳಿದ್ದಾರೆ. ಆತ ಮತ್ತು ರಿತಿಕಾ ಸುಮಾರು ಒಂಭತ್ತು ತಿಂಗಳಿನಿಂದ ಗಾಯತ್ರಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ರಿತಿಕಾ ಉದ್ಯೋಗದಲ್ಲಿ ಮುಂದುವರಿದ್ದರೆ ಸಚಿನ್ ನಿರುದ್ಯೋಗಿಯಾಗಿಯೇ ಉಳಿದಿದ್ದ. ರಿತಿಕಾ ಬಗ್ಗೆ ಆತನ ಶಂಕೆ ದಿನೇ ದಿನೇ ಹೆಚ್ಚುತ್ತಲೇ ಇತ್ತು ಎನ್ನಲಾಗಿದೆ.
ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಸಚಿನ್ ನನ್ನು ಬಂಧಿಸಿದ್ದಾರೆ.







