ಬಿಹಾರ: ಸಂದೇಹಾಸ್ಪದ ವಿಷಪೂರಿತ ಮದ್ಯ ಸೇವನೆ; 7 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ
ಪಾಟ್ನಾ : ಬಿಹಾರದ ಪಶ್ಚಿಮಚಂಪಾರಣ್ ಜಿಲ್ಲೆಯಲ್ಲಿ ವಿಷಪೂರಿತ ಮದ್ಯ ಸೇವಿಸಿ 7 ಮಂದಿ ಸಾವನ್ನಪ್ಪಿದ್ದಾರೆ.
ಈ ಘಟನೆ ಕುರಿತಂತೆ ಆಡಳಿತ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ಸಾವುಗಳು ಲೌರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಿಂದ ವರದಿಯಾಗಿದೆ ಎಂದು ಪೊಲೀಸ್ ವರಿಷ್ಠ ಶೌರ್ಯ ಸುಮನ್ ತಿಳಿಸಿದ್ದಾರೆ.
ಸಾವಿಗೆ ವಿಷ ಪೂರಿತ ಮದ್ಯ ಸೇವನೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಇಬ್ಬರ ಸಾವಿಗೆ ವಿಷಪೂರಿತ ಮದ್ಯ ಸೇವನೆ ಕಾರಣವಲ್ಲ. ಒಬ್ಬರಿಗೆ ಟ್ರಾಕ್ಟರ್ ಢಿಕ್ಕಿಯಾಗಿ ಹಾಗೂ ಇನ್ನೊಬ್ಬರು ಪಕ್ಷವಾತದ ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.
‘‘ಮೊದಲ ಸಾವು ಜನವರಿ 15ರಂದು ಸಂಭವಿಸಿದೆ. ಆದರೆ, ಈ ಬಗ್ಗೆ ಇಂದು ನಮಗೆ ತಿಳಿಯಿತು. ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಎಲ್ಲಾ 7 ಮೃತದೇಹಗಳನ್ನು ದಹನ ಮಾಡಲಾಗಿದೆ. ಆದುದರಿಂದ ಉಳಿದ ಐದು ಮಂದಿಯ ಸಾವಿನ ಕಾರಣದ ಬಗ್ಗೆ ಸ್ಪಷ್ಟತೆ ಇಲ್ಲ. ಸಾವಿನ ಕಾರಣವನ್ನು ಪತ್ತೆ ಹಚ್ಚಲು ನಾವು ತನಿಖಾ ತಂಡವನ್ನು ರೂಪಿಸಿದ್ದೇವೆ’’ ಎಂದು ಸುಮನ್ ರವಿವಾರ ತಿಳಿಸಿದ್ದಾರೆ.
ಮೃತದೇಹಗಳನ್ನು ದಹನ ಮಾಡಿರುವುದರಿಂದ ಸಾವಿನ ಕಾರಣವನ್ನು ಖಚಿತಪಡಿಸುವುದು ಕಷ್ಟಕರ ಎಂದು ಪಶ್ಚಿಮ ಚಂಪಾರಣ್ನ ಸಹಾಯಕ ಅಭಿವೃದ್ಧಿ ಆಯುಕ್ತ (ಡಿಡಿಸಿ) ಸುಮಿತ್ ಕುಮಾರ್ ತಿಳಿಸಿದ್ದಾರೆ.
‘‘ನನ್ನ ಸಹೋದರ ಪ್ರದೀಪ್ ಆತನ ಗೆಳೆಯ ಮನೀಷ್ನೊಂದಿಗೆ ವಿಷಪೂರಿತ ಮದ್ಯ ಸೇವಿಸಿದ. ಇಬ್ಬರೂ ಸಾವನ್ನಪ್ಪಿದ್ದಾರೆ’’ ಎಂದು ಮೃತಪಟ್ಟ ಓರ್ವ ವ್ಯಕ್ತಿಯ ಕುಟುಂಬದ ಸದಸ್ಯ ತಿಳಿಸಿದ್ದಾರೆ.