ಗ್ರಾಮಸ್ಥರಿಂದ ಹಲ್ಲೆ; ಬಿಹಾರ ಕಾಂಗ್ರೆಸ್ ಸಂಸದನಿಗೆ ಗಂಭೀರ ಗಾಯ

PC : timesofindia.indiatimes.com
ಕೈಮೂರ್ (ಬಿಹಾರ): ಜನರ ಗುಂಪೊಂದು ತಮ್ಮ ಮೇಲೆ ನಡೆಸಿದ ಹಲ್ಲೆಯಿಂದ ಕಾಂಗ್ರೆಸ್ ಸಂಸದ ಮನೋಜ್ ಕುಮಾರ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಹಾರದ ಕೈಮೂರ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಲ್ಲೆಯಲ್ಲಿ ಮನೋಜ್ ಕುಮಾರ್ ತಲೆಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕುದ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಥೂಪುರ್ ಗ್ರಾಮದಲ್ಲಿ ಮೆರವಣಿಗೆ ಹೋಗುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಂಸದರ ಖಾಲಿ ವಾಹನವು ಮೆರವಣಿಗೆ ನಡೆಸುತ್ತಿದ್ದ ಕೆಲವು ವ್ಯಕ್ತಿಗಳಿಗೆ ತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ತಕ್ಷಣವೇ ವಾಹನದ ಚಾಲಕನ ಮೇಲೆ ಮೆರವಣಿಗೆಕಾರರು ಹಲ್ಲೆ ನಡೆಸಿದ್ದು, ಘರ್ಷಣೆಗೆ ನಾಂದಿ ಹಾಡಿದೆ. ಘಟನಾ ಸ್ಥಳಕ್ಕೆ ಸಂಸದರ ಬೆಂಬಲಿಗರೂ ಧಾವಿಸಿದ್ದು, ಈ ಘರ್ಷಣೆಯಲ್ಲಿ ಅವರೂ ಭಾಗಿಯಾದರು ಎಂದು ಆರೋಪಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೈಮೂರ್ ನ ಪೊಲೀಸ್ ವರಿಷ್ಠಾಧಿಕಾರಿ ಹರಿ ಮೋಹನ್ ಶುಕ್ಲಾ, “ಸಂಸದ ಮನೋಜ್ ಕುಮಾರ್ ಕೂಡಾ ಸ್ಥಳಕ್ಕೆ ತಲುಪಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು. ಆದರೆ, ಸಲಾಕೆ ಹಾಗೂ ದೊಣ್ಣೆಗಳನ್ನು ಹಿಡಿದಿದ್ದ ಗ್ರಾಮಸ್ಥರಿಂದ ಅವರೂ ಥಳಿತಕ್ಕೊಳಗಾದರು. ಸಂಸದರ ಅಂಗರಕ್ಷಕ ಹಾಗೂ ಆಪ್ತ ಸಹಾಯಕನ ಮೇಲೂ ಗ್ರಾಮಸ್ಥರು ಹಲ್ಲೆ ನಡೆಸಿದರು” ಎಂದು ತಿಳಿಸಿದ್ದಾರೆ.
ಘಟನೆಯ ಕುರಿತು ಎರಡೂ ಕಡೆಯವರಿಂದ ದೂರು ದಾಖಲಾಗಿದ್ದು, ಆರೋಪಗಳ ಕುರಿತು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ತನಿಖೆಯು ಪ್ರಗತಿಯಲ್ಲಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಈ ನಡುವೆ, ಘಟನೆಯನ್ನು ಖಂಡಿಸಿರುವ ಬಿಹಾರ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್, ಸಸಾರಾಂ (ಪರಿಶಿಷ್ಟ ಜಾತಿ) ಮೀಸಲು ಕ್ಷೇತ್ರದ ಸಂಸದ ಮನೋಜ್ ಕುಮಾರ್ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.







