ಬಿಹಾರ | ಪೊಲೀಸ್ ಕಸ್ಟಡಿಯಲ್ಲಿ ಇಮಾಂ ಮೇಲೆ ಹಲ್ಲೆ; ಐವರು ಪೊಲೀಸರ ಅಮಾನತು
ನಿತೀಶ್ ಕುಮಾರ್ ಸರಕಾರವನ್ನು ತರಾಟೆಗೆ ತೆಗೆದುಕೊಂಡ ತೇಜಸ್ವಿ ಯಾದವ್

ಸಾಂದರ್ಭಿಕ ಚಿತ್ರ
ಪಾಟ್ನಾ: ತಮ್ಮ ವಶದಲ್ಲಿದ್ದ ಇಮಾಂ ಒಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಹಾರದ ಮಧುಬನಿ ಜಿಲ್ಲೆಯ ಐವರು ಪೊಲೀಸ್ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧುಬನಿಯ ಪೊಲೀಸ್ ವರಿಷ್ಠಾಧಿಕಾರಿ ಯೋಗೇಂದ್ರ ಕುಮಾರ್ ಪ್ರಕಾರ, ಅಮಾನತಿಗೊಳಗಾಗಿರುವ ಪೊಲೀಸ್ ಸಿಬ್ಬಂದಿಗಳ ಪೈಕಿ ಬೆನಿಪಟ್ಟಿ ಪೊಲೀಸ್ ಠಾಣೆಯ ಠಾಣಾಧಿಕಾರಿ, ಓರ್ವ ಹವಲ್ದಾರ್, ಓರ್ವ ಕಾನ್ಸ್ಟೇಬಲ್ ಹಾಗೂ ಇಬ್ಬರು ಚೌಕಿದಾರರು ಸೇರಿದ್ದಾರೆ ಎನ್ನಲಾಗಿದೆ.
“ಜನವರಿ 29ರಂದು ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರ ಮುಹಮ್ಮದ್ ಫಿರೋಝ್ ಆರೋಪಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ, ಮೋಟಾರ್ ಸೈಕಲ್ ನ ದಾಖಲಾತಿಗಳನ್ನು ಕೇಳಿದಾಗ, ತಪ್ಪಿಸಿಕೊಳ್ಳಲು ಯತ್ನಿಸಿದ್ದ ಮುಹಮ್ಮದ್ ಫಿರೋಝ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ ಅವರ ಮೇಲೆ ಯಾವುದೇ ಬಗೆಯ ದೈಹಿಕ ಕಿರುಕುಳ ನಡೆದಿರುವುದು ಕಂಡು ಬಂದಿಲ್ಲ” ಎಂದು ಯೋಗೇಂದ್ರ ಕುಮಾರ್ ಹೇಳಿದ್ದಾರೆ.
“ಇದಲ್ಲದೆ, ಪೊಲೀಸ್ ಸಿಬ್ಬಂದಿಗಳಿಂದ ಕರ್ತವ್ಯ ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವುದು ಅನಿವಾರ್ಯವಾಯಿತು” ಎಂದು ಹೇಳಿದ ಪೊಲೀಸ್ ವರಿಷ್ಠಾಧಿಕಾರಿಗಳು, “ದೂರುದಾರ ಫಿರೋಝ್ ವಾಹನವು ನಿಯಂತ್ರಣ ತಪ್ಪಿದ್ದರಿಂದ, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ” ಎಂದು ಸ್ಪಷ್ಟನೆ ನೀಡಿದ್ದಾರೆ.
“ಅವರನ್ನು ಹಿಡಿಯುವ ಸಂದರ್ಭದಲ್ಲಿ ಪೊಲೀಸರು ಅವರ ಮೇಲೆ ಬಲಪ್ರಯೋಗ ನಡೆಸಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು” ಎಂದೂ ಅವರು ತಿಳಿಸಿದ್ದಾರೆ.
ಈ ನಡುವೆ, ಪಾಟ್ನಾದಲ್ಲಿ ನಿತೀಶ್ ಕುಮಾರ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಆರ್ಜೆಡಿ ನಾಯಕ ತೇಜಸ್ವಿ ಯಾದವ್, “ರಾಜ್ಯದಲ್ಲಿ ಬಿಜೆಪಿ ಪಾಲುದಾರನಾಗಿರುವ ನಿತೀಶ್ ಕುಮಾರ್ ಸರಕಾರವು ಮುಸ್ಲಿಂ ಸಮುದಾಯದ ವಿರುದ್ಧ ಹಗೆತನ ಸಾಧಿಸುತ್ತಿದೆ” ಎಂದು ಆಪಾದಿಸಿದ್ದಾರೆ.
“ಮುಖ್ಯಮಂತ್ರಿಗಳು ತಮ್ಮ ನಿಯಂತ್ರಣದಲ್ಲಿಲ್ಲ. ಆ ಪ್ರದೇಶದಲ್ಲಿ ಜೆಡಿಯು ಹಲವಾರು ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳನ್ನು ಹಿಡಿತದಲ್ಲಿಟ್ಟುಕೊಂಡಿದ್ದರೂ, ಜೆಡಿಯು ಸಂಸದರು ಹಾಗೂ ಶಾಸಕರು ಬಿಜೆಪಿ ಕಾರ್ಯಕರ್ತರಂತಾಗಿದ್ದಾರೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.