ಬಿಹಾರ | ಧಾರ್ಮಿಕ ಮೆರವಣಿಗೆ ಮೇಲೆ ಕಲ್ಲು ತೂರಾಟ: ಗ್ರಾಮದಲ್ಲಿ ಉದ್ವಿಗ್ನ
8 ಮಂದಿ ಬಂಧನ; ಅಂತರ್ಜಾಲ ಸೇವೆ ಅಮಾನತು

Photo: X/ @District_Jamui
ಜಮುಯಿ (ಬಿಹಾರ): ಧಾರ್ಮಿಕ ಮೆರವಣಿಗೆಯೊಂದರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ, ಬಿಹಾರದ ಜಮುಯಿ ಜಿಲ್ಲೆಯ ಗ್ರಾಮವೊಂದರಲ್ಲಿ ಕೋಮು ಘರ್ಷಣೆ ನಡೆದಿದ್ದು, ಇದರ ಬೆನ್ನಿಗೇ ಜಿಲ್ಲಾಡಳಿತವು 48 ಗಂಟೆಗಳ ಕಾಲ ಅಂತರ್ಜಾಲ ಸೇವೆಯನ್ನು ಅಮಾನತುಗೊಳಿಸಿದೆ.
ರವಿವಾರ ಬಲುವಾದಿಹ್ ಗ್ರಾಮದಲ್ಲಿ ನಡೆದ ಈ ಘರ್ಷಣೆಯಲ್ಲಿ ಜಮುಯಿ ನಗರ ಪರಿಷತ್ ಉಪಾಧ್ಯಕ್ಷ ನಿತೀಶ್ ಶಾ ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಸೋಮವಾರ ಎಂಟು ಮಂದಿಯನ್ನು ಬಂಧಿಸಲಾಗಿದೆ.
ರವಿವಾರ ಸಂಜೆ ಸುಮಾರು 4.30ರ ವೇಳೆಗೆ ಝಾಝಾ ಪೊಲೀಸ್ ಠಾಣೆ ವ್ಯಾಪ್ತಿಯ ದೇವಾಲಯವೊಂದರಿಂದ ಸುಮಾರು 30 ಮಂದಿಯ ಗುಂಪು ಮೆರವಣಿಗೆಯಲ್ಲಿ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.
ಈ ಮೆರವಣಿಗೆಯೊಂದಿಗೆ ಸುಮಾರು ಅರ್ಧ ಡಜನ್ ನಷ್ಟು ಪೊಲೀಸರು ತೆರಳುತ್ತಿದ್ದರೂ, ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದ್ದರಿಂದ ಘರ್ಷಣೆ ಸ್ಫೋಟಗೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಜಮುಯಿ ನಗರ ಪರಿಷತ್ ನ ಉಪಾಧ್ಯಕ್ಷ ನಿತೀಶ್ ಶಾರನ್ನು ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಲಾಗಿದ್ದು, ಇನ್ನುಳಿದ ಐದು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಕುರಿತು ಪ್ರತಿಕ್ರಿಯಿಸಿದ ಜಮುಯಿ ಜಿಲ್ಲಾಧಿಕಾರಿ ಅಭಿಲಾಷ ಶರ್ಮ, “ನಾವು ಮುನ್ನೆಚ್ಚರಿಕೆಯ ಕ್ರಮವಾಗಿ ಮುಂದಿನ 48 ಗಂಟೆಗಳ ಕಾಲ ಅಂತರ್ಜಾಲ ಸೇವೆಯನ್ನು ಅಮಾನತುಗೊಳಿಸಿದ್ದೇವೆ. ಬಲುವಾದಿಹ್ ನಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದ್ದು, ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ” ಎಂದು ಹೇಳಿದ್ದಾರೆ.
ಘಟನೆಯ ಸಂಬಂಧ ಎರಡು ಎಫ್ಐಆರ್ ಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಈ ಪೈಕಿ ಒಂದು ಎಫ್ಐಆರ್ ಅನ್ನು 41 ಮಂದಿಯನ್ನು ಹೆಸರಿಸಿರುವ ಸ್ಥಳೀಯ ನಿವಾಸಿಗಳ ದೂರನ್ನು ಆಧರಿಸಿ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪೈಕಿ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಜಮುಯಿ ಪೊಲೀಸ್ ವರಿಷ್ಠಾಧಿಕಾರಿ ಮದನ್ ಕುಮಾರ್ ಆನಂದ್ ತಿಳಿಸಿದ್ದಾರೆ.







