ವರದಕ್ಷಿಣೆಯಾಗಿ ಕಿಡ್ನಿಯನ್ನು ಕೊಡು : ಬಿಹಾರದಲ್ಲಿ ಮಹಿಳೆಗೆ ಅತ್ತೆ-ಮಾವ ಆಗ್ರಹ!

ಸಾಂದರ್ಭಿಕ ಚಿತ್ರ | PC : freepik.com
ಪಾಟ್ನಾ: ಬಿಹಾರದ ಮುಝಫ್ಫುರ್ ಜಿಲ್ಲೆಯ ದಂಪತಿ ತಮ್ಮ ಸೊಸೆ ವರದಕ್ಷಿಣೆಯಾಗಿ ಬೈಕ್, ಹಣ, ಚಿನ್ನಾಭರಣ ನೀಡುವಲ್ಲಿ ವಿಫಲಗೊಂಡಿದ್ದಕ್ಕಾಗಿ ಅನಾರೋಗ್ಯ ಪೀಡಿತ ಪತಿಗೆ ಆಕೆಯ ಮೂತ್ರಪಿಂಡವನ್ನು ದಾನ ಮಾಡುವಂತೆ ಆಗ್ರಹಿಸಿದ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ.
ಸಂತ್ರಸ್ತ ಮಹಿಳೆ ದೀಪ್ತಿ ತನ್ನ ಸಂಕಷ್ಟವನ್ನು ತೋಡಿಕೊಂಡು ಮುಝಫ್ಫರ್ಪುರದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
2021ರಲ್ಲಿ ಮದುವೆಯ ಬಳಿಕ ತಾನು ಮುಝಫ್ಫರ್ಪುರದಲ್ಲಿನ ಪತಿಯ ಮನೆಗೆ ತೆರಳಿದ್ದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ನಂತರ ತವರು ಮನೆಯಿಂದ ವರದಕ್ಷಿಣೆಯಾಗಿ ಬೈಕ್ ಮತ್ತು ಹಣ ತರುವಂತೆ ಅತ್ತೆ-ಮಾವ ತನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದರು. ಅವರ ಬೇಡಿಕೆಗಳನ್ನು ತಾನು ಒಪ್ಪಿಕೊಳ್ಳದಿದ್ದಾಗ ತನ್ನ ಅನಾರೋಗ್ಯ ಪೀಡಿತ ಪತಿಗೆ ಒಂದು ಮೂತ್ರಪಿಂಡವನ್ನು ದಾನ ಮಾಡುವಂತೆ ಒತ್ತಾಯಿಸತೊಡಗಿದ್ದರು. ತನ್ನ ಪತಿ ಮದುವೆಗೆ ಮೊದಲೇ ಮೂತ್ರಪಿಂಡ ಕಾಯಿಲೆಯಿಂದ ನರಳುತ್ತಿದ್ದರೂ ಮದುವೆಯಾದ ಎರಡು ವರ್ಷಗಳ ಬಳಿಕವಷ್ಟೇ ಅದು ತನಗೆ ಗೊತ್ತಾಗಿತ್ತು. ಆರಂಭದಲ್ಲಿ ಅವರ ಬೇಡಿಕೆಯನ್ನು ತಾನು ಲಘುವಾಗಿ ಪರಿಗಣಿಸಿದ್ದೆ, ಆದರೆ ಅವರು ತನ್ನ ಮೇಲೆ ಒತ್ತಡ ಹೇರಲು ಆರಂಭಿಸಿದ್ದರು. ತಾನು ನಿರಾಕರಿಸಿದ್ದಕ್ಕೆ ತನ್ನನ್ನು ಹಿಗ್ಗಾಮುಗ್ಗಾ ಥಳಿಸಿ ಮನೆಯಿಂದ ಹೊರಹಾಕಿದ್ದಾರೆ ಎಂದು ದೀಪ್ತಿ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾಳೆ.
ಪೋಲಿಸರು ಎರಡೂ ಕುಟುಂಬಗಳ ನಡುವೆ ಸಂಧಾನಕ್ಕೆ ಯತ್ನಿಸಿದ್ದರಾದರೂ ಯಶಸ್ವಿಯಾಗಿಲ್ಲ. ತನಗೆ ವಿಚ್ಛೇದನ ನೀಡುವಂತೆ ತಾನು ಪತಿಗೆ ಆಗ್ರಹಿಸಿದ್ದೆ, ಆದರೆ ತನ್ನಿಂದ ಬೇರ್ಪಡಲು ಆತ ನಿರಾಕರಿಸಿದ್ದ ಎಂದೂ ದೀಪ್ತಿ ತಿಳಿಸಿದ್ದಾಳೆ.
ಪತಿ, ಅತ್ತೆ, ಮಾವ ಸೇರಿದಂತೆ ನಾಲ್ವರನ್ನು ಆರೋಪಿಗಳನ್ನಾಗಿ ಆಕೆ ದೂರಿನಲ್ಲಿ ಹೆಸರಿಸಿದ್ದಾಳೆ. ಈ ವಿಷಯದಲ್ಲಿ ತನಿಖೆಯನ್ನು ಆರಂಭಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.





