Bihar | ಸರಕಾರಿ ಶಾಲೆಯಲ್ಲಿ ಜಾತಿ ತಾರತಮ್ಯ; ತನಿಖೆಗೆ ಆದೇಶ

ಸಾಂದರ್ಭಿಕ ಚಿತ್ರ | Photo Credit : PTI
ಪಾಟ್ನಾ, ಡಿ.28: ಬಿಹಾರದ ಅಲಾವಲ್ಪುರ ಗ್ರಾಮದ ಸರಕಾರಿ ಶಾಲೆಯೊಂದರಲ್ಲಿ ಜಾತಿ ಆಧಾರದಲ್ಲಿ ತಾರತಮ್ಯ ನಡೆಸಲಾಗುತ್ತಿದೆಯೆಂದು ವಿದ್ಯಾರ್ಥಿಗಳು ಆರೋಪಿಸುವುದನ್ನು ತೋರಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ಪಟ್ನಾ ಜಿಲ್ಲಾಡಳಿತ ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ಶಾಲೆಯಲ್ಲಿ ತಮ್ಮನ್ನು ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಮಾಡಲಾಗುತ್ತಿದೆ ಮತ್ತು ತಮ್ಮನ್ನು ಮೇಲ್ಜಾತಿಯ ವಿದ್ಯಾರ್ಥಿಗಳ ಜೊತೆ ಬೆರೆಯದಂತೆ ತಡೆಯಲಾಗುತ್ತಿದೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ಕೆಲವೊಮ್ಮೆ ತಮಗೆ ಆಹಾರವನ್ನು ಕೂಡಾ ನಿರಾಕರಿಸಲಾಗಿದೆ ಎಂದು ಈ ವಿದ್ಯಾರ್ಥಿಗಳು ಆಪಾದಿಸಿದ್ದಾರೆ.
ಕೆಳಜಾತಿಯ ವಿದ್ಯಾರ್ಥಿಗಳ ಪಕ್ಕದಲ್ಲಿ ಮೇಲ್ಜಾತಿಯ ವಿದ್ಯಾರ್ಥಿಗಳು ಕುಳಿತುಕೊಂಡಿರುವುದು ಕಂಡುಬಂದಲ್ಲಿ, ಅವರನ್ನು ಬೇರೆ ಆಸನಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ವಿದ್ಯಾರ್ಥಿಯೊಬ್ಬ ವೀಡಿಯೊದಲ್ಲಿ ಹೇಳಿದ್ದಾನೆ.
ತರಗತಿಗಳಿಗೆ ಶಿಕ್ಷಕರ ಗೈರು, ತರಗತಿಗಳು ನಿಯಮಿತವಾಗಿ ನಡೆಯದಿರುವುದು ಮತ್ತು ಕಳಪೆ ದರ್ಜೆಯ ಆಹಾರ ಇವೆಲ್ಲವುಗಳ ಬಗ್ಗೆಯೂ ವಿದ್ಯಾರ್ಥಿಗಳು ವೀಡಿಯೊದಲ್ಲಿ ಧ್ವನಿಯೆತ್ತಿದ್ದಾರೆ. ಅಷ್ಟೇ ಅಲ್ಲದೆ ಬಲವಂತವಾಗಿ ಈ ವಿದ್ಯಾರ್ಥಿಗಳಿಂದ ದೈಹಿಕ ಶ್ರಮದ ಕೆಲಸವನ್ನೂ ಕೂಡಾ ಬಲವಂತವಾಗಿ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಸರಕಾರಿ ಶಾಲೆಯ ಪ್ರಾಂಶುಪಾಲ ರಂಜನ್ ಕುಮಾರ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ತಾವು ಕೇವಲ ಬಾಲಕಿಯರು ಮತ್ತು ಬಾಲಕರು ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಮಾತ್ರವೇ ಹೇಳುತ್ತೇವೆ ಎಂದು ಆವರು ಹೇಳಿರುವುದಾಗಿ ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ಈ ಪ್ರದೇಶದ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವದಂತೆ ತಾನು ಪ್ರಾಂಶುಪಾಲರಿಗೆ ತಾಕೀತು ಮಾಡಿರುವುದಾಗಿ ಅಲಾವಲ್ಪುರದ ಗ್ರಾ.ಪಂ. ಅಧ್ಯಕ್ಷೆ ನಿತಾನ್ ದೇವಿ ತಿಳಿಸಿದ್ದಾರೆ. ಸರಕಾರಿ ಮಾರ್ಗದರ್ಶಿಗಳನ್ನು ಉಲ್ಲಂಘಿಸುವ ಯಾವುದೇ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.







