Bihar | ಬಾಂಗ್ಲಾದೇಶಿ ಎಂದು ಶಂಕಿಸಿ ವ್ಯಕ್ತಿಗೆ ಥಳಿತ; ಕೊಲೆಯತ್ನ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಮಧುಬನಿ: ಬಿಹಾರದ ಮಧುಬನಿ ಜಿಲ್ಲೆಯ ರಾಜನಗರ ಪೋಲಿಸ್ ಠಾಣಾ ವ್ಯಾಪ್ತಿಯ ಚಕ್ಡಾ ಗ್ರಾಮದಲ್ಲಿ ಬಾಂಗ್ಲಾದೇಶಿ ಎಂದು ಶಂಕಿಸಿ ವ್ಯಕ್ತಿಯೋರ್ವನನ್ನು ಥಳಿಸಿದ ಘಟನೆ ನಡೆದಿದೆ.
ಇಬ್ಬರು ಯುವಕರು ಅಕ್ರಮ ಬಾಂಗ್ಲಾದೇಶಿ ವಲಸಿಗ ಎಂದು ಭಾವಿಸಿ ವ್ಯಕ್ತಿಯೋರ್ವನನ್ನು ಥಳಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಪೋಲಿಸರು ಕ್ರಮ ಕೈಗೊಂಡಿದ್ದಾರೆ.
ಡಿ.30ರಂದು ಈ ಘಟನೆ ನಡೆದಿದ್ದು,ದಿನಗೂಲಿ ಕಾರ್ಮಿಕ ಮುಹಮ್ಮದ್ ಮುರ್ಷಿದ್ ಆಲಂ ಅವರನ್ನು ಬಾಂಗ್ಲಾದೇಶಿಯೆಂದು ಶಂಕಿಸಿ ಗುಂಪೊಂದು ಬರ್ಬರವಾಗಿ ಥಳಿಸಿತ್ತು. ತಲೆಗೆ ಗಂಭೀರ ಗಾಯವಾಗಿರುವ ಆಲಂ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾರೆ ಕೆಲಸಗಾರ ಆಲಂ ಸುಪೌಲ್ ಜಿಲ್ಲೆಯ ಬಿರ್ಪುರ ನಿವಾಸಿಯಾಗಿದ್ದು,ಅವರ ಮೇಲೆ ಹಲ್ಲೆ ನಡೆಸಿದ ಇಬ್ಬರು ರಾಜನಗರ ನಿವಾಸಿಗಳಾಗಿದ್ದಾರೆ. ಈ ಬಗ್ಗೆ ಕೊಲೆಯತ್ನ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನಕ್ಕಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಂತಹ ವದಂತಿಗಳನ್ನು ಹರಡುವವರು ಮತ್ತು ಇಂತಹ ವೀಡಿಯೊಗಳನ್ನು ವೈರಲ್ ಮಾಡುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಮಧುಬನಿ ಎಸ್ಪಿ ಯೋಗೇಂದ್ರ ಕುಮಾರ್ ಅವರು ತಿಳಿಸಿದರು.





