ಬಿಹಾರ| ಸ್ಮಶಾನಕ್ಕೆ ಸಾಗುವ ರಸ್ತೆಗೆ ತಡೆ: ರಸ್ತೆ ಮಧ್ಯೆಯೇ ದಲಿತ ಮಹಿಳೆಯ ಅಂತ್ಯಕ್ರಿಯೆ

ಸಾಂದರ್ಭಿಕ ಚಿತ್ರ
ಪಾಟ್ನಾ, ಜ. 30: ಸ್ಮಶಾನಕ್ಕೆ ಹೋಗುವ ರಸ್ತೆಯನ್ನು ಅತಿಕ್ರಮಿಸಿರುವುದರಿಂದ ಸ್ಮಶಾನಕ್ಕೆ ಹೋಗಲು ಸಾಧ್ಯವಾಗದೆ 91 ವರ್ಷದ ದಲಿತ ಮಹಿಳೆಯ ಅಂತ್ಯ ಕ್ರಿಯೆಯನ್ನು ಕುಟುಂಬದವರು ರಸ್ತೆ ಮಧ್ಯೆಯೇ ನಡೆಸಿದ ಆಘಾತಕಾರಿ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.
ಕುಟುಂಬವು ಸ್ಮಶಾನದ ರಸ್ತೆಯಲ್ಲಿ ತೆರಳದಂತೆ ಅತಿಕ್ರಮಣಕಾರರು ತಡೆದರು. ಇದರಿಂದಾಗಿ ಅವರು ಅನಿವಾರ್ಯವಾಗಿ ಮಾರ್ಗ ಮಧ್ಯದಲ್ಲೇ ಮೃತದೇಹದ ಅಂತ್ಯ ಕ್ರಿಯೆ ನಡೆಸಬೇಕಾಯಿತು ಎಂದು ಮೂಲಗಳು ತಿಳಿಸಿವೆ.
ಈ ಘಟನೆ ವೈಶಾಲಿ ಜಿಲ್ಲೆಯ ಗೊರೌಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸೊಂಧೊ ಅಂಧಾರಿ ಗಾಛಿ ಚೌಕ್ನಲ್ಲಿ ಗುರುವಾರ ರಾತ್ರಿ ನಡೆದಿದೆ. ಮೃತಪಟ್ಟ ದಲಿತ ಮಹಿಳೆಯನ್ನು ಸೊಂಧೊ ವಾಸುದೇವ್ ಗ್ರಾಮದ ನಿವಾಸಿ ಝಾಪಿ ದೇವಿ ಎಂದು ಗುರುತಿಸಲಾಗಿದೆ.
ಸ್ಮಶಾನಕ್ಕೆ ಹೋಗುವ ದಾರಿಯನ್ನು ಅತಿಕ್ರಮಿಸಿರುವುದರಿಂದ ನಮಗೆ ಝಾಪಿ ದೇವಿಯ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ ಎಂದು ಕುಟುಂಬ ತಿಳಿಸಿದೆ.
ಸ್ಮಶಾನಕ್ಕೆ ಹೋಗುವ ರಸ್ತೆಯನ್ನು ಸ್ಥಳೀಯ ಅಂಗಡಿಯವರು ದೀರ್ಘ ಕಾಲದಿಂದ ಅತಿಕ್ರಮಿಸಿಕೊಂಡಿದ್ದಾರೆ. ಕುಟುಂಬ ಮೃತದೇಹದೊಂದಿಗೆ ಈ ದಾರಿಯಲ್ಲಿ ಸಾಗಿದಾಗ ಅಂಗಡಿಯವರು ತಡೆದಿದ್ದಾರೆ. ಕುಟುಂಬ ಪದೇ ಪದೇ ಪ್ರಯತ್ನಿಸಿದರೂ ಅವರಿಗೆ ಸ್ಮಶಾನಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅವರು ರಸ್ತೆ ಮಧ್ಯೆ ಮೃತದೇಹಕ್ಕೆ ಬೆಂಕಿ ಹಚ್ಚಿ ಅಂತಿಮ ವಿಧಿ ವಿಧಾನ ನೆರವೇರಿಸಿದರು ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ಸ್ವೀಕರಿಸಿದ ಬಳಿಕ ಗೊರೌಲ್ ಪೊಲೀಸ್ ಠಾಣೆಯ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿತು. ಆದರೆ, ಗಂಟೆಗಳ ಕಾಲ ಮೂಕ ಪ್ರೇಕ್ಷಕವಾಗಿ ನಿಂತುಕೊಂಡಿತು.
ಸ್ಮಶಾನಕ್ಕೆ ತೆರಳುವ ದಾರಿಯನ್ನು ದೀರ್ಘ ಕಾಲದಿಂದ ಮುಚ್ಚಲಾಗಿದೆ. ಇದರಿಂದ ಜನರಿಗೆ ತೊಂದರೆಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಪ್ರತಿಪಾದಿಸಿದ್ದಾರೆ. ಮತ್ತೆ ಮತ್ತೆ ದೂರು ಸಲ್ಲಿಸಿದ ಹೊರತಾಗಿಯೂ ಸೂಕ್ತ ಕೈಗೊಳ್ಳಲು ಆಡಳಿತ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಸುದ್ದಿ ಕೇಳಿ ಸಮೀಪದ ಗ್ರಾಮದ ಜನರು ಧಾವಿಸಿದರು. ರಸ್ತೆಯಲ್ಲೇ ಅಂತ್ಯ ಕ್ರಿಯೆ ನಡೆಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವೈಶಾಲಿಯ ಜಿಲ್ಲಾ ದಂಡಾಧಿಕಾರಿ ವರ್ಷಾ ಸಿಂಗ್ ಘಟನೆಯ ವಿಚಾರಣೆ ನಡೆಸಲು ಮಹುವಾ ಉಪ ವಿಭಾಗೀಯ ಅಧಿಕಾರಿ, ಡಿಎಸ್ಪಿ, ಗೊರೌಲ್ನ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಅವರನ್ನು ಒಳಗೊಂಡ ಸಮಿತಿ ರೂಪಿಸಿದ್ದಾರೆ. ತನಿಖೆಯ ಬಳಿಕ ತಪ್ಪೆಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಮಿತಿ ಹೇಳಿದೆ.







