ಬಿಹಾರ: 24 ಗಂಟೆಗಳಲ್ಲಿ 22 ಮಂದಿ ನೀರಿನಲ್ಲಿ ಮುಳುಗಿ ಸಾವು

ಸಾಂದರ್ಭಿಕ ಚಿತ್ರ
ಪಾಟ್ನಾ: ಕಳೆದ 24 ಗಂಟೆಗಳಲ್ಲಿ ಬಿಹಾರದ 9 ಜಿಲ್ಲೆಗಳಿಗೆ ಸೇರಿದ 22ಕ್ಕೂ ಅಧಿಕ ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಬಿಹಾರ್ ಸರಕಾರ ರವಿವಾರ ಹೇಳಿದೆ. 22 ಪ್ರಕರಣಗಳ ಪೈಕಿ ಭೋಜ್ಪುರದಿಂದ 5, ಜಹಾನಾಬಾದ್ ನಿಂದ 4, ಪಾಟ್ನಾ, ರೋಹತಾಸ್ನಿಂದ ತಲಾ 3, ದರ್ಭಾಂಗ್, ನವಾಡದಿಂದ ತಲಾ 2, ಮಧೇಪುರ, ಕೈಮೂರ್ ಹಾಗೂ ಔರಂಗಾಬಾದ್ ಜಿಲ್ಲೆಯಿಂದ ತಲಾ ಒಂದು ವರದಿಯಾಗಿದೆ ಎಂದು ಬಿಹಾರ್ ಸರಕಾರ ಬಿಡುಗಡೆ ಮಾಡಿದ ಅಧಿಕೃತ ನೋಟಿಸ್ ಹೇಳಿದೆ.
ಜನರ ಸಾವಿಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ ಹಾಗೂ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಇಂದು ಬೆಳಗ್ಗೆ ದಿಲ್ಲಿಯ ನ್ಯೂ ಉಸ್ಮಾನ್ಪುರ ಪ್ರದೇಶದ ಯುಮುನಾ ಖಾದರ್ ಪ್ರದೇಶದಲ್ಲಿ ಇಬ್ಬರು ಸಹೋದರರು ಮುಳುಗಿ ಮೃತಪಟ್ಟಿದ್ದರು. ನಾವು ಘಟನೆಯ ಕುರಿತು ಮಾಹಿತಿ ಸ್ವೀಕರಿಸಿದ ಕೂಡಲೇ ಸ್ಥಳಕ್ಕೆ ತಲುಪಿದೆವು. ಇಬ್ಬರನ್ನೂ ಕೂಡಲೇ ನೀರಿನಿಂದ ಮೇಲಕ್ಕೆತ್ತಿ ಜೆಪಿಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ನೀರಿನಲ್ಲಿ ಮುಳುಗಿ ಮೃತಪಟ್ಟವರು ಅವಳಿ ಸಹೋದರರಾಗಿದ್ದು, 14 ವರ್ಷ ಪ್ರಾಯದವರು. ಇವರು ದಿಲ್ಲಿಯ ಗಾಮ್ರಿ ಗ್ರಾಮದ ಪುಸ್ತಾದ ನಿವಾಸಿ ಎಂದು ವಿಚಾರಣೆಯ ಸಂದರ್ಭ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.







