ಬಿಹಾರ ಹೂಕೋಸು ಕೃಷಿಗೆ ಅನುಮೋದನೆ ನೀಡಿದೆ: ಅಸ್ಸಾಂ ಸಚಿವನ ವಿವಾದಾತ್ಮಕ ಹೇಳಿಕೆಗೆ ಶಶಿ ತರೂರ್ ಪ್ರತಿಕ್ರಿಯಿಸಿದ್ದು ಹೀಗೆ…

ಬಿಜೆಪಿ ಸಚಿವ ಅಶೋಕ ಸಿಂಘಾಲ್ | Photo Credit : @TheAshokSinghal
ಹೊಸದಿಲ್ಲಿ: 1989ರಲ್ಲಿ ನಡೆದಿದ್ದ ಭಗಲ್ಪುರ್ ಗಲಭೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ, “ಬಿಹಾರ ಹೂಕೋಸು ಕೃಷಿಗೆ ಅನುಮೋದನೆ ನೀಡಿದೆ” ಎಂದು ಅಸ್ಸಾಂ ಸಚಿವ ಅಶೋಕ್ ಸಿಂಘಾಲ್ ಮಾಡಿದ್ದ ವಿವಾದಾತ್ಮಕ ಎಕ್ಸ್ ಪೋಸ್ಟ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಹಾರ ವಿಧಾನಸಭಾ ಚುನಾವಣೆಯ ನಂತರ, ಹೂಕೋಸು ಹೊಲದ ಚಿತ್ರವನ್ನು ಹಂಚಿಕೊಂಡಿದ್ದ ಅಸ್ಸಾಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅಶೋಕ್ ಸಿಂಘಾಲ್, “ಬಿಹಾರ ಹೂಕೋಸು ಕೃಷಿಗೆ ಅನುಮೋದನೆ ನೀಡಿದೆ” ಎಂದು ಬರೆದುಕೊಂಡಿದ್ದರು.
ಅಶೋಕ್ ಸಿಂಘಾಲ್ ರ ಈ ಪೋಸ್ಟ್ ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, “ಈ ಹೇಳಿಕೆಯೇನಾದರೂ, 1989ರಲ್ಲಿ ನಡೆದಿದ್ದ ಭಗಲ್ಪುರ್ ಗಲಭೆಯ ಸಂದರ್ಭದಲ್ಲಿ ನಡೆಸಲಾಗಿದ್ದ ಕುಖ್ಯಾತ ಹೂಕೋಸು ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದೆಯೆ?” ಎಂದು ಖಾರವಾಗಿ ಪ್ರಶ್ನಿಸಿದೆ.
ಅಶೋಕ್ ಸಿಂಘಾಲ್ ತಮ್ಮ ಪ್ರಾಸಂಗಿಕ ಪೋಸ್ಟ್ ನಲ್ಲಿ 1989ರ ಬರ್ಬರ ಭಗಲ್ಪುರ್ ಹತ್ಯಾಕಾಂಡವನ್ನು ಪರೋಕ್ಷವಾಗಿ ಉಲ್ಲೇಖಿಸಿರುವುದರ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರೂ ತಮ್ಮ ಆಘಾತ ಮತ್ತು ಅವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಸಂವೇದನಾರಹಿತ ಮತ್ತು ಕಳಪೆ ಅಭಿಪ್ರಾಯದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದ್ದು, “ಬಿಹಾರದ ಮುಸ್ಲಿಮರ ವಿರುದ್ಧ ಅತ್ಯಂತ ಕೆಟ್ಟದಾಗಿ ನಡೆಸಲಾಗಿರುವ ಪಿತೂರಿಯನ್ನು ಶಶಿ ತರೂರ್ ರಂತಹ ಪ್ರಭಾವಶಾಲಿ ಹಿಂದೂ ನಾಯಕರು ಖಂಡಿಸಬೇಕು” ಎಂದು @isaifpatel ಎಂಬ ಬಳಕೆದಾರರು ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶಶಿ ತರೂರ್, ಅಶೋಕ್ ಸಿಂಘಾಲ್ ರ ಪೋಸ್ಟ್ ಅನ್ನು ಖಂಡಿಸಿದ್ದು, ಜಂಟಿ ಹೇಳಿಕೆಗಳನ್ನು ನೀಡುವುದು ನನ್ನ ಕೆಲಸವಲ್ಲ ಎಂದೂ ಹೇಳಿದ್ದಾರೆ. “ಆದರೆ, ಎಲ್ಲರನ್ನೂ ಒಳಗೊಳ್ಳುವ ಭಾರತದ ಅದಮ್ಯ ವಕ್ತಾರ ಹಾಗೂ ಹೆಮ್ಮೆಯ ಹಿಂದೂ ಆದ ನನಗೆ ಹಾಗೂ ಬಹುತೇಕ ಹಿಂದೂಗಳಿಗೆ ಇಂತಹ ಹತ್ಯಾಕಾಂಡವನ್ನು ಸಮರ್ಥಿಸುವ ಅಥವಾ ಸಂಭ್ರಮಿಸುವುದನ್ನು ನಮ್ಮ ಧರ್ಮವಾಗಲಿ ಅಥವಾ ನಮ್ಮ ರಾಷ್ಟ್ರೀಯತೆಯಾಗಲಿ ಸಮರ್ಥಿಸುವುದಿಲ್ಲ ಹಾಗೂ ಅಂಥವನ್ನು ಶ್ಲಾಘಿಸುವುದಿಲ್ಲ ಎಂಬುದು ತಿಳಿದಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಲೊಗೈನ್ ಹತ್ಯಾಕಾಂಡ ಎಂದೇ ಕುಖ್ಯಾತವಾಗಿರುವ 1989ರಲ್ಲಿ ಬಿಹಾರದ ಭಗಲ್ಪುರ್ ನಲ್ಲಿ ನಡೆದಿದ್ದ ಗಲಭೆಯಲ್ಲಿ 100ಕ್ಕೂ ಹೆಚ್ಚು ಮುಸ್ಲಿಮರನ್ನು ಹತ್ಯೆಗೈಯ್ಯಲಾಗಿತ್ತು. ಬಳಿಕ, ಈ ಹತ್ಯೆಯ ಸಾಕ್ಷ್ಯವನ್ನು ಮರೆಮಾಚಲು, ಮೃತರ ದೇಹಗಳ ಸಮಾಧಿಯ ಮೇಲೆ ಹೂಕೋಸುಗಳ ಗಿಡಗಳನ್ನು ಬೆಳೆಸಲಾಗಿತ್ತು. ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಭಾರತದಾದ್ಯಂತ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಂಡ ಕೆಲವೇ ವಾರಗಳ ಅಂತರದಲ್ಲಿ ಈ ಹತ್ಯಾಕಾಂಡ ನಡೆದಿದ್ದರಿಂದ, ಇದು ಮಹತ್ವ ಪಡೆದುಕೊಂಡಿತ್ತು.







