ನಾಳೆ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ : ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್

Photo Credit : PTI
ಹೊಸದಿಲ್ಲಿ,ನ.13: ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆಯ ಮತಏಣಿಕೆ ಶುಕ್ರವಾರ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು-ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವು ಅಧಿಕಾರವನ್ನು ಉಳಿಸಿಕೊಳ್ಳಲಿದೆಯೇ ಅಥವಾ ತೇಜಸ್ವಿ ಯಾದವ್ ಅವರ ಮಹಾಘಟಬಂಧನ ಮೈತ್ರಿಕೂಟವು ಅಧಿಕಾರದ ಗದ್ದುಗೆ ಹಿಡಿಯಲಿದೆಯೇ ಎಂಬುದು ತೀರ್ಮಾನವಾಗಲಿದೆ.
ಪ್ರಶಾಂತ್ ಕಿಶೋರ್ ನೇತೃತ್ವದ ನೂತನ ಪಕ್ಷ ‘ಜನಸುರಾಜ್’ ತೃತೀಯ ಶಕ್ತಿಯಾಗಿ ಹೊರಹೊಮ್ಮಲಿದೆಯೇ ಎಂಬ ಪ್ರಶ್ನೆಗೂ ಈ ಚುನಾವಣೆಯಲ್ಲಿ ಉತ್ತರ ದೊರೆಯಲಿದೆ.
ಬೆಳಗ್ಗೆ ಎಂಟು ಗಂಟೆಗೆ ಮತಏಣಿಕೆ ನಡೆಯಲಿದ್ದು, ಎಲ್ಲಾ 243 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಶುಕ್ರವಾರವೇ ಪ್ರಕಟವಾಗುವ ನಿರೀಕ್ಷೆಯಿದೆ ಮತ್ತು ಕಣದಲ್ಲಿರುವ 2,616 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
38 ಜಿಲ್ಲೆಗಳಲ್ಲಿರುವ ಎಲ್ಲಾ 46 ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಕೇಂದ್ರೀಯ ಸಶಸ್ತ್ರ ಪಡೆಗಳು ಹಾಗೂ ರಾಜ್ಯ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ ಸಿಸಿಟಿವಿ ಕಣ್ಗಾವಲು ಮತ್ತು ಭದ್ರತಾ ವ್ಯವಸ್ಥೆಗಳನ್ನು ಕೂಡ ಕಲ್ಪಿಸಲಾಗಿದೆ.
ಬಿಹಾರ ವಿಧಾನಸಭೆಗೆ ನವೆಂಬರ್ 6 ಹಾಗೂ 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಶೇ.67ರಷ್ಟು ಮತದಾನವಾಗಿತ್ತು.







