ಬಿಹಾರ | ಬುರ್ಖಾ ಧರಿಸಿದ ಮತದಾರರ ಗುರುತು ಪರಿಶೀಲನೆಗೆ ಬಿಜೆಪಿ ಒತ್ತಾಯ

Photo Credit: PTI
ಪಾಟ್ನಾ, ಅ. 4: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ 2025ರ ಸಿದ್ಧತೆಗಳ ಹಿನ್ನೆಲೆಯಲ್ಲಿ ಬುರ್ಖಾ ಧರಿಸಿದ ಮಹಿಳಾ ಮತದಾರರ ಗುರುತಿನ ಚೀಟಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕೆಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದು, ಇದರ ವಿರುದ್ಧ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪಾಟ್ನಾದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಪತ್ರಕರ್ತರೊಂದಿಗೆ ಮಾತನಾಡಿ, “ಚುನಾವಣಾ ಪ್ರಕ್ರಿಯೆಯನ್ನು ಸರಳಗೊಳಿಸಲು ಮತದಾನವನ್ನು ಒಂದು ಅಥವಾ ಎರಡು ಹಂತಗಳಲ್ಲಿ ನಡೆಸುವುದು ಸೂಕ್ತ. ಬುರ್ಖಾ ಧರಿಸಿದ ಮಹಿಳೆಯರು ಸೇರಿದಂತೆ ಎಲ್ಲ ಮತದಾರರ ಗುರುತಿನ ಪರಿಶೀಲನೆ ಕಡ್ಡಾಯವಾಗಬೇಕು. ನಿಜವಾದ ಮತದಾರರು ಮಾತ್ರ ಮತದಾನ ಮಾಡುವಂತಾಗಬೇಕು,” ಎಂದು ಹೇಳಿದರು.
ಈ ಸಭೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗದ ತಂಡ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.
ಆದರೆ ಆರ್ಜೆಡಿ ಪಕ್ಷವು ಈ ಬೇಡಿಕೆಯನ್ನು “ರಾಜಕೀಯ ಪಿತೂರಿ” ಎಂದು ತೀವ್ರವಾಗಿ ಖಂಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಪಕ್ಷದ ಲೋಕಸಭಾ ನಾಯಕ ಅಭಯ್ ಕುಶ್ವಾಹ, “ಮತದಾರರ ಗುರುತಿನ ಚೀಟಿಗಳು ಈಗಾಗಲೇ ಹೊಸ ಛಾಯಾಚಿತ್ರಗಳೊಂದಿಗೆ ನವೀಕರಿಸಲ್ಪಟ್ಟಿವೆ. ಗುರುತಿನ ವಿಚಾರವನ್ನು ಎತ್ತುವುದು ಬಿಜೆಪಿ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ತಂತ್ರ,” ಎಂದು ಆರೋಪಿಸಿದ್ದಾರೆ.
ಆರ್ಜೆಡಿ ಪಕ್ಷವು ಚುನಾವಣೆ ಛತ್ ಹಬ್ಬದ ನಂತರ ನಡೆಸಬೇಕು ಹಾಗೂ ಮತದಾನ ಹಂತಗಳನ್ನು ಎರಡುಕ್ಕಿಂತ ಹೆಚ್ಚು ಮಾಡಬಾರದು ಎಂದು ಸಲಹೆ ನೀಡಿದೆ. ಇದೇ ಅಭಿಪ್ರಾಯವನ್ನು ಬಿಜೆಪಿಯೂ ಹಂಚಿಕೊಂಡಿದ್ದು, ನವೆಂಬರ್ 3 ಅಥವಾ 4ರಿಂದ ಮತದಾನ ಪ್ರಾರಂಭಿಸಬೇಕು ದು ಸೂಚಿಸಿದೆ.
ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಹಾಗೂ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷಗಳೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ.
ಬಿಹಾರದ ಗ್ರಾಮೀಣ ಮತ್ತು ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಮತದಾರರು ಬೆದರಿಕೆ ಮತ್ತು ಒತ್ತಡಕ್ಕೆ ಒಳಗಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಬಿಜೆಪಿ ಮತ್ತು ಆರ್ಜೆಡಿ ಎರಡೂ ಪಕ್ಷಗಳು ಸುರಕ್ಷತಾ ಕ್ರಮಗಳನ್ನು ಬಲಪಡಿಸಬೇಕೆಂದು ಆಗ್ರಹಿಸಿದೆ. ಅರೆಸೈನಿಕ ಪಡೆಗಳನ್ನು ಮುಂಚಿತವಾಗಿ ನಿಯೋಜಿಸಿ, ಮತದಾರರಲ್ಲಿ ವಿಶ್ವಾಸ ತುಂಬುವ ಉದ್ದೇಶದಿಂದ ರೂಟ್ ಮಾರ್ಚ್ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಎಲ್ಲಾ ಸೂಕ್ಷ್ಮ ಮತಗಟ್ಟೆಗಳ ಪಟ್ಟಿಯನ್ನು ಮುಂಚಿತವಾಗಿ ಹಂಚಿಕೊಳ್ಳುವಂತೆ ಆರ್ಜೆಡಿ ನಾಯಕರಾದ ಕುಶ್ವಾಹ ಅವರು ಚುನಾವಣಾ ಆಯೋಗವನ್ನು ಕೋರಿದ್ದಾರೆ. “ಈ ಮಾಹಿತಿ ಮುಂಚಿತವಾಗಿ ದೊರೆತರೆ ಮತದಾರರ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯವಾಗುತ್ತದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದಲ್ಲದೆ, ಇತ್ತೀಚಿನ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಕುರಿತು ಆರ್ಜೆಡಿ ಆತಂಕ ವ್ಯಕ್ತಪಡಿಸಿದೆ. ಸುಮಾರು 3.66 ಲಕ್ಷ ಮತದಾರರ ಹೆಸರುಗಳು ಅಳಿಸಲ್ಪಟ್ಟಿವೆ ಎಂಬ ಆರೋಪ ಮಾಡಿರುವ ಪಕ್ಷವು, ಈ ವಿಷಯದ ಸಂಪೂರ್ಣ ವಿವರವನ್ನು ಚುನಾವಣಾ ಆಯೋಗ ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಚುನಾವಣಾ ಅವಧಿಯಲ್ಲಿ ಸರ್ಕಾರವು ಹೊಸ ಯೋಜನೆಗಳ ಘೋಷಣೆಗಳನ್ನು ನಿಲ್ಲಿಸಬೇಕು ಹಾಗೂ ಪ್ರಚಾರದ ವೇಳೆ ನಡೆಯುವ ವೈಯಕ್ತಿಕ ದಾಳಿಗಳನ್ನು ತಡೆಯಲು ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕುಶ್ವಾಹ ಅವರು ಆಗ್ರಹಿಸಿದ್ದಾರೆ.







