ಬಿಹಾರ ಚುನಾವಣೆ | ಅಳಿಸಲಾದ ಮತಗಳ ಸಂಖ್ಯೆ ಹಿಂದಿನ ಚುನಾವಣೆಯ ಗೆಲುವಿನ ಅಂತರಕ್ಕಿಂತ ಹೆಚ್ಚಾಗಿದೆ: ಕಾಂಗ್ರೆಸ್ ಆರೋಪ

Photo Credit: PTI
ಹೊಸದಿಲ್ಲಿ, ಅ.4: ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಅಳಿಸಲಾದ ಮತದಾರರ ಸಂಖ್ಯೆ ಹಿಂದಿನ ಚುನಾವಣೆಗಳ ಗೆಲುವಿನ ಅಂತರಕ್ಕಿಂತಲೂ ಹೆಚ್ಚಾಗಿದೆ ಎಂದು ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಹಾರ ವಿಧಾನಸಭಾ ಚುನಾವಣಾ ಪ್ರಕ್ರಿಯೆಗೆ ಮುನ್ನ ಅಂತಿಮ ಮತದಾರರ ಪಟ್ಟಿಯಲ್ಲಿ ಗಂಭೀರ ಅಕ್ರಮಗಳು ನಡೆದಿದೆ ಎಂದು ಉಲ್ಲೇಖಿಸಿದ್ದಾರೆ.
ಚುನಾವಣಾ ಆಯೋಗವು ಆಡಳಿತ ಪಕ್ಷದ ಪ್ರಭಾವಕ್ಕೆ ಒಳಗಾಗಿದ್ದು, ಬಿಜೆಪಿ ಹಾಗೂ ಅದರ ಮೈತ್ರಿಕೂಟಗಳಿಗೆ ರಾಜಕೀಯ ಲಾಭಕ್ಕಾಗಿ “ವಿಶೇಷ ತೀವ್ರ ಪರಿಷ್ಕರಣೆ (SIR)” ಪ್ರಕ್ರಿಯೆ ನಡೆಸುತ್ತಿದೆ ಎಂದು ರಮೇಶ್ ಆರೋಪಿಸಿದ್ದಾರೆ.
“ಚುನಾವಣಾ ಆಯೋಗವು ಬಿಜೆಪಿಯ ಆಜ್ಞೆಯ ಮೇರೆಗೆ ಇಡೀ ಎಸ್ಐಆರ್ ನಾಟಕವನ್ನು ಆಯೋಜಿಸಿದೆ. ಬಿಹಾರದ ಹಲವಾರು ಪ್ರದೇಶಗಳಿಂದ ಬಂದಿರುವ ವರದಿಗಳು ಈ ಪ್ರಕ್ರಿಯೆಯ ಉದ್ದೇಶ ಆಡಳಿತ ಪಕ್ಷಕ್ಕೆ ರಾಜಕೀಯ ಲಾಭ ಕಲ್ಪಿಸುವುದಾಗಿದೆ ಎಂಬುದನ್ನು ದೃಢಪಡಿಸುತ್ತವೆ,” ಎಂದು ಅವರು ಹೇಳಿದ್ದಾರೆ.
ಬಿಹಾರದ ಜಮುಯಿ ಪ್ರದೇಶದಲ್ಲಿ ಒಂದೇ ಮನೆಯಲ್ಲಿ 247 ಮತದಾರರ ಹೆಸರು ಪತ್ತೆಯಾದ ವರದಿಗಳನ್ನು ಉಲ್ಲೇಖಿಸಿ, “ಇದು ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ, ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದಕ್ಕೆ ಸಾಕ್ಷಿ. ಒಂದೇ ಬೂತ್ ನಲ್ಲಿ ಒಬ್ಬರ ಹೆಸರು ಮೂರು ಬಾರಿ ಕಂಡುಬಂದಿರುವುದು ಈ ಪ್ರಕ್ರಿಯೆಯ ದೌರ್ಬಲ್ಯವನ್ನು ಬಯಲಿಗೆಳೆದಿದೆ,” ಎಂದು ಜೈರಾಮ್ ರಮೇಶ್ ಕಿಡಿ ಕಾರಿದರು.
“ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ನ ಸ್ಪಷ್ಟ ಆದೇಶಗಳನ್ನು ಗೌರವಿಸದೆ, ಅಕ್ರಮಗಳನ್ನು ಮುಂದುವರಿಸುತ್ತಿದೆ. ಬಿಹಾರದ ಹಲವು ಕ್ಷೇತ್ರಗಳಲ್ಲಿ ಅಳಿಸಲಾದ ಮತದಾರರ ಸಂಖ್ಯೆ ಹಿಂದಿನ ಚುನಾವಣೆಯ ಗೆಲುವಿನ ಅಂತರಕ್ಕಿಂತ ಹೆಚ್ಚಾಗಿರುವುದು ಆಯೋಗದ ವಿಶ್ವಾಸಾರ್ಹತೆಯ ಮೇಲೆ ಗಂಭೀರ ಪ್ರಶ್ನೆಯನ್ನೆತ್ತಿದೆ", ಎಂದು ಜೈರಾಮ್ ರಮೇಶ್ ಕಳವಳ ವ್ಯಕ್ತಪಡಿಸಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯ ನೈಜ ಉದ್ದೇಶ ವಿರೋಧ ಪಕ್ಷಗಳ ಬೆಂಬಲಿಗರ ಹೆಸರುಗಳನ್ನು ಪಟ್ಟಿಯಿಂದ ಅಳಿಸುವುದಷ್ಟೇ. ಕಾಂಗ್ರೆಸ್ ಪಕ್ಷವು ಈ ವಿಷಯದಲ್ಲಿ ಇತರ ವಿರೋಧ ಪಕ್ಷಗಳೊಂದಿಗೆ ಸೇರಿ ಸುಪ್ರೀಂ ಕೋರ್ಟ್ ಸಂಪರ್ಕಿಸಿತ್ತು ಎಂದು ಅವರು ಉಲ್ಲೇಖಿಸಿದರು.
“ಚುನಾವಣಾ ಆಯೋಗವು ದೇಶದ ಸಂವಿಧಾನಿಕ ಸಂಸ್ಥೆಯಾಗಿದ್ದು, ಅದು ಯಾವುದೇ ಪಕ್ಷದ ಕೈಗೊಂಬೆಯಾಗಿ ಕಾರ್ಯನಿರ್ವಹಿಸಬಾರದು. ಅದರೆ ಈಗ ಆಯೋಗದ ಕಾರ್ಯವೈಖರಿ ಮತ್ತು ರಾಜಕೀಯ ಪಕ್ಷಪಾತವು ಪ್ರಜಾಪ್ರಭುತ್ವದ ಬುನಾದಿಗಳಿಗೆ ಧಕ್ಕೆಯಾಗಿದೆ,” ಎಂದು ರಮೇಶ್ ಟೀಕಿಸಿದ್ದಾರೆ.







