ಬಿಹಾರ ವಿಧಾನಸಭಾ ಚುನಾವಣೆ | ಸಿಪಿಐ(ಎಂಎಲ್) ಲಿಬರೇಷನ್ನ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ದೀಪಂಕರ ಭಟ್ಟಾಚಾರ್ಯ | Photo Credit : PTI
ಪಾಟ್ನಾ,ಅ.18: ಬಿಹಾರದಲ್ಲಿ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಪಾಲುದಾರನಾಗಿರುವ ಸಿಪಿಐ(ಎಂಎಲ್) ಲಿಬರೇಷನ್ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಾಗಿ ತನ್ನ 20 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಎಲ್ಲ ಹಾಲಿ 12 ಶಾಸಕರಿಗೆ ಮತ್ತೆ ಟಿಕೆಟ್ ನೀಡಿದೆ.
ಪಕ್ಷವು 2020ರ ಚುನಾವಣೆಗಳಲ್ಲಿ ತಾನು ಗೆದ್ದಿರದ ಕ್ಷೇತ್ರಗಳಲ್ಲಿ ಹೊಸಮುಖಗಳನ್ನು ಕಣಕ್ಕಿಳಿಸಿದೆ. ಆಗ 19 ಸ್ಥಾನಗಳಿಗೆ ಸ್ಪರ್ಧಿಸಿದ್ದ ಪಕ್ಷವು ಈ ಪೈಕಿ 12 ಸ್ಥಾನಗಳನ್ನು ಗೆದ್ದಿತ್ತು.
ಪಟ್ಟಿಯನ್ನು ಬಿಡುಗಡೆಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐ(ಎಂಎಲ್)ಲಿಬರೇಷನ್ ಪ್ರಧಾನ ಕಾರ್ಯದರ್ಶಿ ದೀಪಂಕರ ಭಟ್ಟಾಚಾರ್ಯ ಅವರು, ‘ಮೈತ್ರಿಕೂಟದ ಸ್ಫೂರ್ತಿಯನ್ನು ನಾವು ಕಾಯ್ದುಕೊಂಡಿದ್ದೇವೆ. ಈ ಸಲ ನಮಗೆ ಹೆಚ್ಚಿನ ಸ್ಥಾನಗಳು ಸಿಗಬೇಕಿತ್ತಾದರೂ ಕೇವಲ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಾವು ಅಂತಿಮವಾಗಿ ನಿರ್ಧರಿಸಿದ್ದೇವೆ. ನಾವು ಕನಿಷ್ಠ 24 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿದ್ದೆವು. ಆದರೆ ಅದು ಸಾಕಾರಗೊಳ್ಳಲಿಲ್ಲ’ ಎಂದು ಹೇಳಿದರು.
ಮಹಾಘಟಬಂಧನ ಭಾರೀ ಬಹುಮತದೊಂದಿಗೆ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸ ತನಗಿದೆ. ಜನರು ಎನ್ಡಿಎ ಸರಕಾರದಿಂದ ಬೇಸತ್ತಿದ್ದಾರೆ ಎಂದರು.
ಬಿಹಾರ ವಿಧಾನಸಭಾ ಚುನಾವಣೆಯು ನ.6 ಮತ್ತು 11ರಂದು ನಡೆಯಲಿದ್ದು,ನ.14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.





