ಬಿಹಾರ: ಪ್ರಬಲ ಜಾತಿಗೆ ಸೇರಿದ ವ್ಯಕ್ತಿಯ ಜಮೀನಿನಿಂದ ಸೊಪ್ಪು ಕಿತ್ತ ದಲಿತ ಬಾಲಕಿಯ ಥಳಿಸಿ ಹತ್ಯೆ
ಪಾಟ್ನಾ: ಪ್ರಬಲ ಜಾತಿಗೆ ಸೇರಿದ ವ್ಯಕ್ತಿಯ ಜಮೀನಿನಿಂದ ಸೊಪ್ಪು ಕಿತ್ತ ಆರೋಪದಲ್ಲಿ ದಲಿತ ಬಾಲಕಿಯೋರ್ವಳನ್ನು ಬರ್ಬರವಾಗಿ ಥಳಿಸಿ ಹತ್ಯೆಗೈದ ಘಟನೆ ಕೈಮೂರು ಜಿಲ್ಲೆಯ ಗ್ರಾಮವೊಂದರಲ್ಲಿ ಬುಧವಾರ ನಡೆದಿದೆ.
ಹತ್ಯೆ ಘಟನೆಗೆ ಸಂಬಂಧಿಸಿ ಪೊಲೀಸರು ಜಮೀನಿನ ಮಾಲಕ, ಆತನ ಪುತ್ರ ಹಾಗೂ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಚೈನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಟಾ ಗ್ರಾಮದ ಜಿತೇಂದ್ರ ರಾಮ್ ಅವರ ಪುತ್ರಿ ಸುಂದರಿ ಕುಮಾರಿ (14) ತನ್ನ ಸೋದರ ಸಂಬಂಧಿಯೊಂದಿಗೆ ಸೊಪ್ಪು ಕೀಳಲು ಹೊಲಕ್ಕೆ ತೆರಳಿದ್ದರು. ಈ ಸಂದರ್ಭ ಜಮೀನಿನ ಮಾಲಕ ರಾಮಧಾರ್ ಯಾದವ್, ಆತನ ಪುತ್ರ ಗೌರವ್ ಯಾದವ್ ಬಾಲಕಿಯರನ್ನು ಹಿಡಿದಿದ್ದಾರೆ ಹಾಗೂ ಬಿದಿರಿನ ಕೋಲಿನಿಂದ ಅಮಾನುಷವಾಗಿ ಥಳಿಸಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡ ಬಾಲಕಿ ಸುಂದರಿ ಕುಮಾರಿ ಮನೆಗೆ ತಲುಪುವ ಮೊದಲೇ ಮಾರ್ಗ ಮಧ್ಯೆ ಕುಸಿದು ಬಿದ್ದಿದ್ದಾಳೆ. ಆಕೆಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಇನ್ಸ್ಪೆಕ್ಟರ್ ರಮಾನಂದ್ ಮಂಡಲ್ ಮಾತನಾಡಿ, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಲಾಗಿದೆ. ಎಲ್ಲರೂ ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ನಡುವೆ ಸಿಪಿಐ ಎಂಎಲ್ನ ಕೈಮೂರ್ ಜಿಲ್ಲಾ ಕಾರ್ಯದರ್ಶಿ ವಿಜಯ್ ಯಾದವ್ ನೇತೃತ್ವದ ಐವರು ಸದಸ್ಯರ ತಂಡ ಗುರುವಾರ ಸಂತ್ರಸ್ತ ಬಾಲಕಿಯ ಕುಟುಂಬವನ್ನು ಭೇಟಿಯಾಗಿದೆ ಹಾಗೂ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದೆ. ಅನಂತರ ತಂಡ ಆರೋಪಿಗಳನ್ನು ಬಂಧಿಸುವಂತೆ ಹಾಗೂ ಬಾಲಕಿಯ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡುವಂತೆ ಆಗ್ರಹಿಸಿದೆ.