ಬಿಹಾರ | ಇನ್ನೂ ಎರಡು ಪಕ್ಷಗಳ ಸೇರ್ಪಡೆ; ಮಹಾ ಘಟಬಂಧನ್ ಗೆ ಸ್ಥಾನಹಂಚಿಕೆ ಕಗ್ಗಂಟು

ಪಾಟ್ನಾ,ಸೆ.7: ಬಿಹಾರದಲ್ಲಿ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವಂತೆ ಆಡಳಿತಾರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ಮಹಾ ಘಟಬಂಧನ್ ನಲ್ಲಿ ಸ್ಥಾನ ಹಂಚಿಕೆ ಮಾತುಕತೆಗಳು ಆರಂಭಗೊಂಡಿವೆ.
ಚಿರಾಗ್ ಪಾಸ್ವಾನ್, ಜಿತನ್ ರಾಮ್ ಮಾಂಝಿ ಮತ್ತು ಉಪೇಂದ್ರ ಕುಶ್ವಾಹ್ ಅವರ ಬೇಡಿಕೆಗಳಿಂದಾಗಿ ಎನ್‌ಡಿಎದಲ್ಲಿ ಮಾತುಕತೆಗಳು ಸವಾಲಿನದ್ದಾಗಿದ್ದರೆ ಅತ್ತ ಪ್ರತಿಪಕ್ಷಗಳ ಪಾಳಯಕ್ಕೆ ಹೇಮಂತ್ ಸೊರೇನ್ ಅವರ ಜೆಎಂಎಂ ಮತ್ತು ಪಶುಪತಿ ಪರಾಸ್ ನೇತೃತ್ವದ ಎಲ್‌ಜೆಪಿ ಬಣ ಸೇರ್ಪಡೆಗೊಂಡಿವೆ. ಜೊತೆಗೆ ಕಾಂಗ್ರೆಸ್ ಮತ್ತು ಸಿಪಿಎಂ-ಎಂಎಲ್ ಕೂಡ ಹೆಚ್ಚಿನ ಸ್ಥಾನಗಳಿಗೆ ಬೇಡಿಕೆ ಮಂಡಿಸುತ್ತಿವೆ.
ಮಹಾ ಘಟಬಂಧನ್ ನಲ್ಲಿ ಪ್ರಸ್ತುತ ಆರ್‌ಜೆಡಿ, ಕಾಂಗ್ರೆಸ್, ಸಿಪಿಐ, ಸಿಪಿಎಂ, ಸಿಪಿಎಂ-ಎಂಎಲ್ ಮತ್ತು ವಿಐಪಿ ಸೇರಿದಂತೆ ಆರು ಪಕ್ಷಗಳಿದ್ದು, ಜೆಎಂಎಂ ಮತ್ತು ಎಲ್‌ಜೆಪಿ(ಪರಾಸ್) ಸೇರ್ಪಡೆಯೊಂದಿಗೆ ಅದರ ಸ್ಥಾನಹಂಚಿಕೆ ತಲೆನೋವು ಇನ್ನಷ್ಟು ಹೆಚ್ಚಿದೆ. ಅಂದರೆ ರಾಜ್ಯದ 243 ವಿಧಾನಸಭಾ ಕ್ಷೇತ್ರಗಳನ್ನು ಎಂಟು ಪಕ್ಷಗಳ ನಡುವೆ ಹಂಚಬೇಕಿದ್ದು, ಇದು ಒಮ್ಮತಕ್ಕೆ ಬರುವುದನ್ನು ಜಟಿಲಗೊಳಿಸಲಿದೆ.
ಮಹಾ ಘಟಬಂಧನ ಪರಾಸ್ ಮೂಲಕ ಪಾಸ್ವಾನ್ ಮತಗಳನ್ನು,ವಿಶೇಷವಾಗಿ ಪಾಸ್ವಾನ್ ಕುಟುಂಬದ ತವರಾಗಿರುವ ಖಗಾರಿಯಾದಲ್ಲಿ ವಿಭಜಿಸಲು ಪ್ರಯತ್ನಿಸುತ್ತಿದೆ.
ಪರಾಸ್ ಸುದೀರ್ಘ ಕಾಲದಿಂದಲೂ ಖಗಾರಿಯಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಎಲ್‌ಜೆಪಿ ಪರಾಸ್ ಬಣವು ಖಂಡಿತವಾಗಿಯೂ 2-3 ಸ್ಥಾನಗಳನ್ನು ಪಡೆಯಲಿದ್ದು, ಅಲ್ಲಿಂದ ಪರಾಸ್ ಮತ್ತು ಅವರ ಪುತ್ರ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ.
ಪರಾಸ್ ಅವರನ್ನು ಹಾಜಿಪುರದಿಂದ ಸ್ಪರ್ಧೆಗಿಳಿಸುವ ಮೂಲಕ ಪಾಸ್ವಾನ್ ಮತಗಳನ್ನು ವಿಭಜಿಸಬಹುದು ಎಂದು ಮಹಾ ಘಟಬಂಧನ್ ನಿರೀಕ್ಷಿಸಿದೆ.
ಆರ್‌ಜೆಡಿ ಮತ್ತು ಕಾಂಗ್ರೆಸ್ ಜಾರ್ಖಂಡ್‌ನಲ್ಲಿ ಸರಕಾರದ ಭಾಗವಾಗಿರುವುದರಿಂದ ಜೆಎಂಎಂಗೆ ಸ್ಥಾನಗಳನ್ನು ನೀಡುವುದೂ ಅಗತ್ಯವಾಗಿದೆ. ಜಾರ್ಖಂಡ್‌ಗೆ ಹೊಂದಿಕೊಂಡಿರುವ ಬಂಕಾ,ಮುಂಗೇರ್ ಮತ್ತು ಭಾಗಲ್ಪುರ ಪ್ರದೇಶಗಳಲ್ಲಿ ಜೆಎಂಎಂಗೆ ಸ್ಥಾನಗಳನ್ನು ನೀಡುವ ನಿರೀಕ್ಷೆಯಿದೆ.
ಶನಿವಾರ ಪಾಟ್ನಾದಲ್ಲಿ ಸಭೆಯ ಬಳಿಕ ಬಿಹಾರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರಾಮ್ ಅವರು, ಎಲ್ಲ ಪಕ್ಷಗಳೂ ತಮ್ಮ ಕೆಲವು ಸ್ಥಾನಗಳನ್ನು ಬಿಟ್ಟುಕೊಡಬೇಕಾಗುತ್ತದೆ ಮತ್ತು ಮೈತ್ರಿಕೂಟದಲ್ಲಿಯ ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.







