ಬಿಹಾರ ಚುನಾವಣೆ | ಮಹುವಾ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ತೇಜ್ ಪ್ರತಾಪ್ ಯಾದವ್ ಸ್ಪರ್ಧೆ

ತೇಜಪ್ರತಾಪ ಯಾದವ | PC : ANI
ಪಾಟ್ನಾ,ಜು.27: ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವೈಶಾಲಿ ಜಿಲ್ಲೆಯ ಮಹುವಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಇತ್ತೀಚಿಗೆ ಲಾಲು ಪ್ರಸಾದ್ ರಿಂದ ಆರ್ಜೆಡಿ ಮತ್ತು ತನ್ನ ಕುಟುಂಬದಿಂದ ಉಚ್ಚಾಟಿಸಲ್ಪಟ್ಟಿರುವ ತೇಜ್ ಪ್ರತಾಪ್ 2015ರಿಂದ 2020ರವರಗೆ ಮಹುವಾ ಕ್ಷೇತ್ರದ ಶಾಸಕರಾಗಿದ್ದರು.
2020ರಲ್ಲಿ ಹಸನ್ಪುರ ಕ್ಷೇತ್ರಕ್ಕೆ ಸ್ಥಳಾಂತರಗೊಂಡು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
ಕಳೆದ ತಿಂಗಳು ಮಹುವಾಕ್ಕೆ ಭೇಟಿ ನೀಡಿದ್ದ ಅವರು ಸ್ಥಳೀಯರೊಂದಿಗೆ ಸಭೆ ನಡೆಸಿದ್ದರು.
‘ಈ ಸಲದ ವಿಧಾನಸಭಾ ಚುನಾವಣೆಯ ಬಳಿಕ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುವುದಿಲ್ಲ. ಯಾವುದೇ ಸರಕಾರ ಬರಲಿ, ಅದು ಯುವಕರು,ಉದ್ಯೋಗ,ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿದರೆ ನಾನು ಮತ್ತು ನನ್ನ ತಂಡ ಅದನ್ನು ಬಲವಾಗಿ ಬೆಂಬಲಿಸುತ್ತೇವೆ ’ ಎಂದು ತೇಜ್ ಪ್ರತಾಪ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ‘ಮಹುವಾ ಕ್ಷೇತ್ರದಿಂದ ಸ್ಪರ್ಧಿಸಲು ನಾನೀಗಾಗಲೇ ನಿರ್ಧರಿಸಿದ್ದೇನೆ. ಇದು ಹಲವಾರು ಪ್ರತಿಸ್ಪರ್ಧಿಗಳಲ್ಲಿ ಭೀತಿಯನ್ನು ಮೂಡಿಸಿದೆ’ಎಂದರು.
ಇತ್ತೀಚಿಗೆ ಮಹಿಳೆಯೋರ್ವಳೊಂದಿಗೆ 12 ವರ್ಷಗಳ ತನ್ನ ಸಂಬಂಧವನ್ನು ತೇಜ್ ಪ್ರತಾಪ್ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಗೊಳಿಸಿದ ಬಳಿಕ ಅವರನ್ನು ಲಾಲು ಪ್ರಸಾದ್ ಆರ್ಜೆಡಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ್ದರು ಮತ್ತು ಕುಟುಂಬದಿಂದಲೂ ಹೊರಹಾಕಿದ್ದರು. ಆಗಿನಿಂದ ತೇಜ್ ಪ್ರತಾಪ್ ತನ್ನ ಕಾರಿನಲ್ಲಿ ಆರ್ಜೆಡಿ ಧ್ವಜಗಳನ್ನು ಬಳಸುತ್ತಿಲ್ಲ.
ಆರ್ಜೆಡಿಯ ಮುಕೇಶ್ ರೋಷನ್ ಪ್ರಸ್ತುತ ಮಹುವಾ ಶಾಸಕರಾಗಿದ್ದಾರೆ.







