ಬಿಹಾರ | ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ : ತೇಜ್ ಪ್ರತಾಪ್ ವಿರುದ್ಧ ಪ್ರಕರಣ ದಾಖಲು

ತೇಜ್ ಪ್ರತಾಪ್ | Photo Credit : PTI
ಪಾಟ್ನಾ, ಅ. 20: ಬಿಹಾರದ ವೈಶಾಲಿ ಜಿಲ್ಲೆಯ ಮಹುವಾ ವಿಧಾನ ಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭ ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ ಆರೋಪದಲ್ಲಿ ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಅವರ ಹಿರಿಯ ಪುತ್ರ ಹಾಗೂ ಜನಶಕ್ತಿ ಜನತಾ ದಳದ ವರಿಷ್ಠ ತೇಜ್ ಪ್ರತಾಪ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಕ್ಟೋಬರ್ 16ರಂದು ನಾಮಪತ್ರ ಸಲ್ಲಿಕೆ ಮರವಣಿಗೆ ಸಂದರ್ಭ ಯಾದವ್ ಅವರು ಪೊಲೀಸ್ ಲಾಂಛನ ಹಾಗೂ ಕೆಂಪು ದೀಪ ಹೊಂದಿರುವ ಎಸ್ಯುವಿ ವಾಹನ ಬಳಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಮಹುವಾದ ಸರ್ಕಲ್ ಅಧಿಕಾರಿ ಸಂಬಂಧಿತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ರವಿವಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದಾಗ ಖಾಸಗಿ ವಾಹನದಲ್ಲಿ ಪೊಲೀಸ್ ಲಾಂಛನ ಹಾಗೂ ಕೆಂಪು ದೀಪ ಇರುವುದು ಕಂಡು ಬಂದಿದೆ. ಆದ್ದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದೆ.
ಆದರೆ ಅನಂತರ ಯಾದವ್ ಅವರು ತನ್ನ ಫೇಸ್ಬುಕ್ ಪೋಸ್ಟ್ ಅನ್ನು ಅಳಿಸಿದ್ದಾರೆ ಹಾಗೂ ತನ್ನ ಫೇಸ್ ಬುಕ್ ಪೇಜ್ ಹ್ಯಾಕ್ ಮಾಡಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.





