ಬಿಹಾರ ಚುನಾವಣಾ ಫಲಿತಾಂಶ | ಭಾರೀ ಮುಖಭಂಗದ ಹೊರತಾಗಿಯೂ ಬಿಜೆಪಿ, ಜೆಡಿಯುಗಿಂತ ಹೆಚ್ಚು ಮತ ಗಳಿಸಿದ ಆರ್ಜೆಡಿ

Photo Credit : ANI
ಪಾಟ್ನಾ,ನ.14: ಆಡಳಿತಾರೂಢ ಎನ್ಡಿಎ ಬಿಹಾರದಲ್ಲಿ ಅಧಿಕಾರಕ್ಕೆ ಮರಳಿದ್ದರೆ, 2010ರ ನಂತರ ತನ್ನ ಅತ್ಯಂತ ಹೀನಾಯ ಸೋಲನ್ನು ಅನುಭವಿಸಿರುವ ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿಗೆ ಇಂತಹ ಸ್ಥಿತಿಯಲ್ಲಿಯೂ ಸಂಭ್ರಮಿಸಲು ಕಾರಣವಿದೆ. ಅದು ಚಲಾಯಿಸಲಾದ ಮತಗಳಲ್ಲಿ ಅತ್ಯಂತ ಹೆಚ್ಚಿನ ಪಾಲು ಗಳಿಸಿದೆ. ಅದು ತನ್ನ ಎದುರಾಳಿಗಳಾದ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯುಗಿಂತ ಹೆಚ್ಚಿನ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ.
243 ವಿಧಾನಸಭಾ ಸ್ಥಾನಗಳ ಪೈಕಿ 143 ಸ್ಥಾನಗಳಿಗೆ ಸ್ಪರ್ಧಿಸಿದ್ದ ಆರ್ಜೆಡಿ ಮತ ಎಣಿಕೆ ದಿನವಾದ ಶುಕ್ರವಾರ ಸಂಜೆಯ ವೇಳೆಗಾಗಲೇ ಶೇ.22.84ರಷ್ಟು ಮತಗಳನ್ನು ಪಡೆದಿದ್ದು, ಇದು ಬಿಜೆಪಿಗಿಂತ ಶೇ.1.86 ಮತ್ತು ಜೆಡಿಯುಗಿಂತ ಶೇ.3.97ರಷ್ಟು ಅಧಿಕವಾಗಿದೆ.
2020ರ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಏಕೈಕ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಆರ್ಜೆಡಿ ಪ್ರಸಕ್ತ ಚುನಾವಣೆಯಲ್ಲಿ ಕೇವಲ 25 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. 2010ರಲ್ಲಿ ಆರ್ಜೆಡಿ ಕೇವಲ 22 ಸ್ಥಾನಗಳನ್ನು ಗಳಿಸಿತ್ತು. ಇಂದಿನದು ಅದಕ್ಕಿಂತ ಹೀನಾಯ ಸೋಲಾಗಿದೆ.





