ಮತದಾರ ಪಟ್ಟಿಯ ಪರಿಷ್ಕರಣೆ ನಿಲ್ಲಿಸದಿದ್ದಲ್ಲಿ ಬಿಹಾರ ಚುನಾವಣೆಗೆ ಬಹಿಷ್ಕಾರ: ತೇಜಸ್ವಿ ಎಚ್ಚರಿಕೆ

ತೇಜಸ್ವಿ ಯಾದವ್ | PTI
ಪಾಟ್ನಾ: ಒಂದು ವೇಳೆ ಚುನಾವಣಾ ಆಯೋಗವು ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯನ್ನು ನಿಲ್ಲಿಸದೆ ಇದ್ದಲ್ಲಿ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಮಹಾಘಟಬಂಧನ ಮೈತ್ರಿಕೂಟದ ಪಕ್ಷಗಳು ಬಹಿಷ್ಕರಿಸಲೂಬಹುದು ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಗುರುವಾರ ಪುನರುಚ್ಚರಿಸಿದ್ದಾರೆ.
ಬಿಹಾರ ವಿಧಾನಸಭಾ ಅಧಿವೇಶನದ ಕಲಾಪದಲ್ಲಿ ಮಾತನಾಡುತ್ತಿದ್ದ ಅವರು, ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿವಾದದ ಬಗ್ಗೆ ಉತ್ತರಿಸುತ್ತಾ, ಬಿಹಾರ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಆಯ್ಕೆಯನ್ನು ನಾವು ಮುಕ್ತವಾಗಿರಿಸಿದ್ದೇವೆಂದು ಅವರು ಹೇಳಿದ್ದಾರೆ.
ಚುನಾವಣೆಯಲ್ಲಿ ವಿಜೇತ ಯಾರೆಂಬುದನ್ನು ಈಗಾಗಲೇ ಫಿಕ್ಸ್ ಮಾಡಲಾಗಿದೆ. ಹೀಗಿರುವಾಗ ಇಂತಹದ್ದೊಂದು ಚುನಾವಣೆಯನ್ನು ನಡೆಸುವುದರಲ್ಲಿ ಯಾವ ಪ್ರಯೋಜನವಿದೆ ಎಂದವರು ಪ್ರಶ್ನಿಸಿದರು.
‘‘ಗಣತಿ ಫಾರಂಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಪರವಾಗಿ ತಮ್ಮದೇ ಆದ ಹಸ್ತಾಕ್ಷರಗಳನ್ನು ಹಾಗೂ ಬೆರಳಚ್ಚುಗಳನ್ನು ಹಾಕುತ್ತಿದ್ದಾರೆ. ಖಾಲಿ ಫಾರಂಗಳನ್ನು ತ್ಯಾಜ್ಯದ ಕಾಗದಗಳಂತೆ ಬಳಸಿಕೊಳ್ಳಲಾಗುತ್ತಿದೆ ಎಂದವರು ಆಪಾದಿಸಿದರು.
ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿನ ಲೋಪದೋಷಗಳನ್ನು ಬೆಟ್ಟುಮಾಡಿ ತೋರಿಸಿದ ಪತ್ರಕರ್ತರ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಲಾಗುತ್ತಿದೆ. ಚುನಾವಣಾ ಆಯೋಗವನ್ನು ಆಡಳಿತಾರೂಢ ಸರಕಾರದ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು.
ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆನ್ನು ನಿಲ್ಲಿಸದಿದ್ದಲ್ಲಿ ಚುನಾವಣೆ ಬಹಿಷ್ಕರಿಸುವ ಸಾಧ್ಯತೆಯ ಬಗ್ಗೆ ಮಹಘಟಬಂಧನದ ಎಲ್ಲಾ ನಾಯಕರ ಜೊತೆ ಸಮಾಲೋಚಿಸುವುದಾಗಿ ತೇಜಸ್ವಿ ಯಾದವ್ ಬೆದರಿಕೆ ಹಾಕಿದ್ದಾರೆ.
ಬುಧವಾರ ಕೂಡಾ ವಿಧಾನಸಭಾ ಕಲಾಪದ ಸಂದರ್ಭ ಮಾತನಾಡಿದ ತೇಜಸ್ವಿ ಯಾದವ್ ಅವರು ಎಸ್ಐಆರ್ ನಿಲ್ಲದೆ ಇದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದರು.
ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಕಪ್ಪುಬಣ್ಣದ ಟೀ-ಶರ್ಟ್ ಧರಿಸಿ ತೇಜಸ್ವಿ ಯಾದವ್ ಅವರಿಗೆ ಈ ವಿಷಯವಾಗಿ ಹೇಳಿಕೆ ನೀಡಲು ಸ್ಪೀಕರ್ ಅನುಮತಿ ನೀಡಿದ್ದರು.







