ಬಿಹಾರ ಚುನಾವಣೆ | ಎನ್‌ಡಿಎ, ಇಂಡಿಯಾ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು
ಪಾಟ್ನಾ : ಆಡಳಿತಾರೂಢ ಎನ್‌ಡಿಎ ಹಾಗೂ ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟವು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಈವರೆಗೆ ಘೋಷಿಸಿಲ್ಲ.
ಈ ಮಧ್ಯೆ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟಗಳಲ್ಲಿನ ಅಂಗಪಕ್ಷಗಳು ಸೀಟು ಹಂಚಿಕೆಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ಪ್ರಯತ್ನಿಸುತ್ತಿವೆ.
ಆದಾಗ್ಯೂ ಪ್ರಶಾಂತ್ ಕಿಶೋರ್ ಅವರ ಜನಸೂರಜ್ ಪಕ್ಷವು ಗುರುವಾರ ತನ್ನ 51 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ.
ಬಿಹಾರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕುರಿತು ಅಸಮಾಧಾನ ಹೆಚ್ಚುತ್ತಿದ್ದು, ಸಣ್ಣ ಪಕ್ಷಗಳು ಅಧಿಕ ಸೀಟುಗಳನ್ನು ನೀಡುವಂತೆ ಪಟ್ಟು ಹಿಡಿದಿವೆ. ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಶುಕ್ರವಾರ ಪಾಟ್ನಾವನ್ನು ತಲುಪಿದ್ದು, ಪಕ್ಷದ ಹಿರಿಯ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ.
ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಕ್ಷವು ಈ ಹಿಂದೆ 20-22 ಸ್ಥಾನಗಳಿಗೆ ಬೇಡಿಕೆಯಿಟ್ಟಿದ್ದರೂ, ಈಗ 45 ಕ್ಷೇತ್ರಗಳನ್ನು ತನಗೆ ನೀಡಬೇಕೆಂದು ಒತ್ತಾಯಿಸುತ್ತಿದೆ.
ಎನ್‌ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಏರ್ಪಾಡುಗಳು ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆದಾದ ಬಳಿಕ ಪಕ್ಷವು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಿದೆ.
ಎನ್‌ಡಿಎ ಮೈತ್ರಿಕೂಟದ ಪಕ್ಷಗಳಾದ ಜೆಡಿಯು ಹಾಗೂ ಬಿಜೆಪಿ, ಕ್ರಮವಾಗಿ 102 ಹಾಗೂ 101 ಸ್ಥಾನಗಳಿಗೆ ಸ್ಪರ್ಧಿಸುವ ನಿರೀಕ್ಷೆಯಿದೆ.
ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷವಾದ ಆರ್‌ಜೆಡಿ 135-140 ಸ್ಥಾನಗಳಿಗೆ ಸ್ಪರ್ಧಿಸುವ ಸಾಧ್ಯತೆಯಿದೆ. ಆರ್‌ಜೆಡಿಯು ಕಾಂಗ್ರೆಸ್‌ಗೆ 50-52 ಸ್ಥಾನಗಳ ಕೊಡುಗೆ ನೀಡಿದ್ದು, ಆದರೆ ಕಾಂಗ್ರೆಸ್ 70 ವಿಧಾನಸಭಾ ಕ್ಷೇತ್ರಗಳನ್ನು ನೀಡುವಂತೆ ಒತ್ತಡ ಹೇರುತ್ತಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 70 ಸ್ಥಾನಗಳಿಗೆ ಸ್ಪರ್ಧಿಸಿದ್ದು, ಕೇವಲ 19 ಸ್ಥಾನಗಳನ್ನು ಗೆದ್ದಿತ್ತು.
ಇತ್ತ ಇಂಡಿಯಾ ಮೈತ್ರಿಕೂಟದ ಇನ್ನೊಂದು ಪ್ರಮುಖ ಅಂಗಪಕ್ಷವಾದ ಸಿಪಿಐ (ಎಂಎಲ್) ಲಿಬರೇಶನ್‌ಗೆ 20-25 ಸ್ಥಾನಗಳನ್ನು ನೀಡಲಾಗಿದ್ದು, ಅದು ಕೂಡಾ ಅಸಮಾಧಾನಗೊಂಡಿದೆ.
ಕಳೆದ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂಎಲ್) 19 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, 12ರಲ್ಲಿ ಜಯಗಳಿಸಿದೆ. ಈ ಸಲ ಅದು 40 ಸ್ಥಾನಗಳನ್ನು ನೀಡುವಂತೆ ಆಗ್ರಹಿಸಿತ್ತೆನ್ನಲಾಗಿದೆ.







