ಬಿಹಾರ ವಿಧಾನಸಭಾ ಚುನಾವಣೆ | ಟಿಕೆಟ್ ಹಂಚಿಕೆಯಲ್ಲಿ ಮುಸ್ಲಿಮರಿಗೆ ಸಿಗದ ಸೂಕ್ತ ಪ್ರಾತಿನಿಧ್ಯತೆ

ತೇಜಸ್ವಿ ಯಾದವ್ | Photo Credit : PTI
ಪಾಟ್ನಾ, ಅ. 24: ಬಿಹಾರದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ 17.7 ಶೇಕಡ ಇದ್ದರೂ, ರಾಜಕೀಯ ಪಕ್ಷಗಳು ಕೇವಲ 34 ಮುಸ್ಲಿಮ್ ಅಭ್ಯರ್ಥಿಗಳಿಗೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ಗಳನ್ನು ನೀಡಿವೆ. ತನ್ನ 143 ಸ್ಥಾನಗಳ ಪೈಕಿ, ರಾಷ್ಟ್ರೀಯ ಜನತಾ ದಳ (ಆರ್ಜೆಡಿ)ವು 18 (12.58 ಶೇಕಡ) ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. 2020ರ ಚುನಾವಣೆಯಲ್ಲಿ ಅದು 144 ಸ್ಥಾನಗಳ ಪೈಕಿ 15 ಸ್ಥಾನಗಳಿಗೆ ಮುಸ್ಲಿಮ್ ಅಭ್ಯರ್ಥಿಗಳನ್ನು ನೇಮಿಸಿತ್ತು.
ಆಡಳಿತಾರೂಢ ಸಂಯುಕ್ತ ಜನತಾ ದಳ (ಜೆಡಿಯು)ವು ತನ್ನ 101 ಸ್ಥಾನಗಳ ಪೈಕಿ ಕೇವಲ ನಾಲ್ವರು (3.96 ಶೇಕಡ) ಮುಸ್ಲಿಮರಿಗೆ ಟಿಕೆಟ್ಗಳನ್ನು ನೀಡಿದೆ. ಅದು 2020ರಲ್ಲಿ 10 ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅದೇ ವೇಳೆ, ಕಾಂಗ್ರೆಸ್ ಪಕ್ಷವು ತನ್ನ 61 ಸ್ಥಾನಗಳ ಪೈಕಿ 10 ಮುಸ್ಲಿಮರಿಗೆ ಟಿಕೆಟ್ಗಳನ್ನು ನೀಡಿದೆ.
ಬಿಜೆಪಿಯು ಮುಸ್ಲಿಮರಿಗೆ ಟಿಕೆಟ್ ನೀಡಿಲ್ಲ. ಅದರ ಮಿತ್ರಪಕ್ಷ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಒಂದು ಸ್ಥಾನದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
87 ಕ್ಷೇತ್ರಗಳಲ್ಲಿ ಮುಸ್ಲಿಮರ ಜನಸಂಖ್ಯಾ ಪ್ರಮಾಣ 20 ಶೇಕಡ ಇದೆ. ಸುಮಾರು 75 ಶೇಕಡ ಮುಸ್ಲಿಮರು ಉತ್ತರ ಬಿಹಾರದಲ್ಲಿ ವ್ಯಾಪಿಸಿದ್ದಾರೆ.
ಟಿಕೆಟ್ ವಿತರಣೆಯಲ್ಲಿ ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ಸಿಗದಿರುವ ಬಗ್ಗೆ ಮುಸ್ಲಿಮ್ ನಾಯಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ‘‘ಅದೊಂದು ಅನೌಪಚಾರಿಕ ಸಭೆಯಾಗಿತ್ತು. ನಾವು ಮತ್ತೊಮ್ಮೆ ಸಭೆ ಸೇರುತ್ತೇವೆ. ಆದರೆ, ನಮಗೆ ಬೇರೆ ಆಯ್ಕೆಯೂ ಇಲ್ಲ’’ ಎಂದು ಟಿಕೆಟ್ ಹಂಚಿಕೆ ಬಗ್ಗೆ ಚರ್ಚಿಸಲು ನಡೆದ ಮುಸ್ಲಿಮ್ ನಾಯಕರ ಸಭೆಯೊಂದರಲ್ಲಿ ಭಾಗವಹಿಸಿದ ಅನ್ವರುಲ್ ಹುದಾ ಎಂಬವರು ಹೇಳಿದರು.
ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 6 ಮತ್ತು 11ರಂದು ಚುನಾವಣೆ ನಡೆಯಲಿದೆ.







