ಬಿಹಾರ ಚುನಾವಣೆ | ‘ಇಂಡಿಯಾ’ ಮೈತ್ರಿಕೂಟ ಗೆದ್ದರೆ ಎಂಎಸ್ಪಿಯೊಂದಿಗೆ ಕ್ವಿಂಟಲ್ ಭತ್ತಕ್ಕೆ 300ರೂ.,ಗೋದಿಗೆ 400ರೂ.ಬೋನಸ್ : ತೇಜಸ್ವಿ ಯಾದವ್ ಭರವಸೆ

Photo: PTI
ಪಾಟ್ನಾ,ನ.4: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ರಾಜ್ಯದ ರೈತರು ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್ಪಿ) ಹೆಚ್ಚುವರಿಯಾಗಿ ಪ್ರತಿ ಕ್ವಿಂಟಲ್ ಭತ್ತಕ್ಕೆ 300ರೂ. ಮತ್ತು ಗೋದಿಗೆ 400ರೂ.ಗಳ ಬೋನಸ್ ಪಡೆಯಲಿದ್ದಾರೆ ಎಂದು ಆರ್ಜೆಡಿ ನಾಯಕ ಹಾಗೂ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರು ಮಂಗಳವಾರ ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿ ಯಾದವ್, ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಪಿಎಸಿ) ಮತ್ತು ಪ್ರಾಥಮಿಕ ಮಾರಾಟ ಸಹಕಾರ ಸಂಘಗಳ(ವ್ಯಾಪಾರ ಮಂಡಲ) ಮುಖ್ಯಸ್ಥರಿಗೆ ಜನ ಪ್ರತಿನಿಧಿಗಳ ಸ್ಥಾನಮಾನವನ್ನು ನೀಡಲಾಗುವುದು ಎಂದು ಹೇಳಿದರು.
‘ಪ್ರತಿಯೊಬ್ಬ ರೈತರಿಗೆ ಎಂಎಸ್ಪಿಗೆ ಹೆಚ್ಚುವರಿಯಾಗಿ ಭತ್ತಕ್ಕೆ 300ರೂ. ಮತ್ತು ಗೋದಿಗೆ 400 ರೂ.ಸಿಗುವಂತೆ ನಾವು ನೋಡಿಕೊಳ್ಳುತ್ತೇವೆ. ಇದರೊಂದಿಗೆ ರಾಜ್ಯದ 8,400 ನೋಂದಾಯಿತ ವ್ಯಾಪಾರ ಮಂಡಲಗಳು ಮತ್ತು ಪಿಎಸಿಗಳ ವ್ಯವಸ್ಥಾಪಕರು ಗೌರವ ಧನವನ್ನು ಪಡೆಯುತ್ತಾರೆ’ ಎಂದರು.
ಬಿಹಾರದಲ್ಲಿ ನ.6 ಮತ್ತು 11ರಂದು ಚುನಾವಣೆ ನಡೆಯಲಿದ್ದು, ನ.14ರಂದು ಫಲಿತಾಂಶಗಳು ಪ್ರಕಟಗೊಳ್ಳಲಿವೆ.





