ಬಿಹಾರ ಚುನಾವಣೆ | 1990ರ ನಂತರ ನೂತನ ವಿಧಾನಸಭೆಯಲ್ಲಿ ಅತ್ಯಂತ ಕಡಿಮೆ ಮುಸ್ಲಿಮ್ ಶಾಸಕರು

Photo Credit : vidhansabha.bihar.gov.in
ಪಾಟ್ನಾ,ನ.15: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕೇವಲ 10 ಮುಸ್ಲಿಮ್ ಶಾಸಕರು ಬಿಹಾರ ವಿಧಾನಸಭೆಗೆ ಆಯ್ಕೆಯಾಗಿದ್ದು,ಇದು 1990ರ ನಂತರ ಕನಿಷ್ಠ ಸಂಖ್ಯೆಯಾಗಿದೆ.
2022-23ರ ರಾಜ್ಯ ಜಾತಿ ಗಣತಿಯ ಪ್ರಕಾರ ಬಿಹಾರದ 13.07 ಕೋಟಿ ಜನಸಂಖ್ಯೆಯಲ್ಲಿ ಮುಸ್ಲಿಮ್ ಸಮುದಾಯವು ಶೇ,17.7ರಷ್ಟು ಪಾಲನ್ನು ಹೊಂದಿದೆ. 2020ಕ್ಕೆ ಹೋಲಿಸಿದರೆ ಈ ಬಾರಿ ಆಡಳಿತಾರೂಢ ಎನ್ಡಿಎ ಮತ್ತು ಪ್ರತಿಪಕ್ಷ ಮೈತ್ರಿಕೂಟ ಮಹಾಘಟಬಂಧನ ಕಡಿಮೆ ಸಂಖ್ಯೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
ಶುಕ್ರವಾರ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ವಿಧಾನಸಭೆಯ ಒಟ್ಟು 243 ಸ್ಥಾನಗಳ ಪೈಕಿ 202ನ್ನು ಎನ್ಡಿಎ,35ನ್ನು ಮಹಾಘಟಬಂಧನ ಮತ್ತು ಎಐಎಂಐಎಂ ಐದು ಸ್ಥಾನಗಳನ್ನು ಗೆದ್ದಿವೆ.
2025ರ ಚುನಾವಣೆಯಲ್ಲಿ ಜೆಡಿಯು ನಾಲ್ವರು ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಆದರೆ ನಿತೀಶ್ ಸರಕಾರದಲ್ಲಿ ಸಚಿವರಾಗಿರುವ ಮಹಮ್ಮದ್ ಝಮಾ ಖಾನ್ ಅವರು ಮಾತ್ರ ಕೈಮುರ್ ಜಿಲ್ಲೆಯ ಚೈನ್ ಪುರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
ಎಲ್ಜೆಪಿ(ಆರ್ವಿ) ಕಿಶನಗಂಜ್ ಜಿಲ್ಲೆಯ ಬಹಾದುರ್ಗಂಜ್ನಲ್ಲಿ ತನ್ನ ಏಕೈಕ ಮುಸ್ಲಿಮ್ ಅಭ್ಯರ್ಥಿ ಮುಹಮ್ಮದ್ ಕಲಿಮುದ್ದೀನ್ ಅವರನ್ನು ಕಣಕ್ಕಿಳಿಸಿದ್ದು, ಅಲ್ಲಿ ಎಐಎಂಐಎಂ ಅಭ್ಯರ್ಥಿ ಮುಹಮ್ಮದ್ ತೌಸೀಫ್ ಆಲಂ 28,726 ಮತಗಳ ಅಂತರದಿಂದ ಗೆದ್ದಿದ್ದಾರೆ.
ಆರ್ಜೆಡಿ ಅಭ್ಯರ್ಥಿಗಳಾದ ಆಸಿಫ್ ಅಹ್ಮದ್ ಬಿಸ್ಫಿಯಿಂದ ಮತ್ತು ದಿವಂಗತ ಗ್ಯಾಂಗಸ್ಟರ್-ರಾಜಕಾರಣಿ ಮುಹಮ್ಮದ್ ಶಹಾಬುದ್ದೀನ್ ಪುತ್ರ ಒಸಾಮಾ ಸಾಹೇಬ್ ರಘುನಾಥಪುರದಿಂದ ಗೆದ್ದಿದ್ದಾರೆ.
ಸೀಮಾಂಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಮುಹಮ್ಮದ್ ಕಮರುಲ್ ಹೋಡಾ ಕಿಶನಗಂಜ್ ನಲ್ಲಿ ಮತ್ತು ಅಬಿದುರ್ ರೆಹಮಾನ್ ಅರಾರಿಯಾದಲ್ಲಿ ವಿಜಯಿಯಾಗಿದ್ದಾರೆ.
2010ರಲ್ಲಿ ರಾಜ್ಯ ವಿಧಾನಸಭೆಯಲ್ಲಿ 19 (ಶೇ.7.81) ಮುಸ್ಲಿಮ್ ಶಾಸಕರಿದ್ದರೆ 2015ರಲ್ಲಿ ಅವರ ಸಂಖ್ಯೆ 24ಕ್ಕೆ (ಶೇ.9.87)ಕ್ಕೆ ಏರಿಕೆಯಾಗಿತ್ತು.
2020ರಲ್ಲಿ ವಿಧಾನಸಭೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಶಾಸಕರ ಸಂಖ್ಯೆ 19ಕ್ಕೆ ಇಳಿದಿತ್ತು. ಈ ಪೈಕಿ ಎಂಟು ಜನರು ಆರ್ಜೆಡಿ, ಐವರು ಎಐಎಐಎಂ ಮತ್ತು ನಾಲ್ವರು ಕಾಂಗ್ರೆಸ್ ಗೆ ಸೇರಿದ್ದರು. ಬಿಎಸ್ಪಿ ಮತ್ತು ಸಿಪಿಐ (ಎಂಎಲ್) ಲಿಬರೇಷನ್ ತಲಾ ಓರ್ವ ಶಾಸಕರನ್ನು ಹೊಂದಿದ್ದವು.







