ನಿತೀಶ್ ಕುಮಾರ್ ನಿವಾಸಕ್ಕೆ ಸಚಿವರ ದಂಡು; ಪಾಟ್ನಾ-ದಿಲ್ಲಿಯಲ್ಲಿ ಸರಕಾರ ರಚನೆ ಮಾತುಕತೆ

PC | timesofindia
ಪಾಟ್ನಾ: ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವ ಆಡಳಿತಾರೂಢ ಎನ್ಡಿಎ ಕೂಟ ಬಿಹಾರದಲ್ಲಿ ನೂತನ ಸರಕಾರ ರಚನೆಗೆ ಮಾತುಕತೆ ಆರಂಭಿಸಿದೆ. ಹೊಸ ಸರಕಾರ ರಚನೆಗೆ ಅನುವು ಮಾಡಿಕೊಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ರಾಜೀನಾಮೆ ನೀಡಲಿದ್ದಾರೆ ಎಂದು ಹಿರಿಯ ಜೆಡಿಯು ಮುಖಂಡರೊಬ್ಬರು ಹೇಳಿದ್ದಾರೆ. ನಿರ್ಗಮನ ಸರ್ಕಾರದ ಕೊನೆಯ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸುತ್ತಾರೆ ಎಂದು ಹೇಳಲಾಗಿದೆ.
ವಾಪಸ್ಸಾದ ಬಳಿಕ ಅವರು ಹೊಸದಾಗಿ ಆಯ್ಕೆಯಾದ 85 ಮಂದಿ ಜೆಡಿಯು ಶಾಸಕರ ಸಭೆ ನಡೆಸುವರು. ಆ ಬಳಿಕ ಎನ್ಡಿಎ ಶಾಸಕರ ಪ್ರತ್ಯೇಕ ಸಭೆ ನಡೆಯಲಿದ್ದು, ಇದಕ್ಕೆ ಸ್ಥಳ ನಿಗದಿಯಾಗಬೇಕಿದೆ. 89 ಶಾಸಕರನ್ನು ಹೊಂದಿರುವ ಬಿಜೆಪಿ ಅತಿದೊಡ್ಡ ಪಕ್ಷವಾಗಿದ್ದು, ಸರಕಾರ ರಚನೆ ಬಗ್ಗೆ ಭಾನುವಾರ ಅಥವಾ ಸೋಮವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಿದೆ.
ಬಿಜೆಪಿಯ ಅಧಿಕೃತ ಘೋಷಣೆ ಬಳಿಕ ಎನ್ಡಿಎ ಶಾಸಕರು ನಿತೀಶ್ ಕುಮಾರ್ ಅವರನ್ನು ನೂತನ ನಾಯಕನಾಗಿ ಆಯ್ಕೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಬುಧವಾರ ಅಥವಾ ಗುರುವಾರ ಹೊಸ ಸರಕಾರ ರಚನೆಯಾಗಲಿದೆ ಎಂದು ಹಿರಿಯ ಜೆಡಿಯು ಮುಖಂಡರು ವಿವರಿಸಿದ್ದಾರೆ.
ಭಾನುವಾರ ಮುಂಜಾನೆಯಿಂದಲೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ನಿತೀಶ್ ಕುಮಾರ್ ನಿವಾಸ ಮುಖಂಡರಿಂದ ತುಂಬಿ ತುಳುಕುತ್ತಿದೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ನಿತೀಶ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಹಲವು ಮಂದಿ ಎನ್ಡಿಎ ನಾಯಕರು, ಕೇಂದ್ರ ಸಚಿವರಾದ ಲಲನ್ ಸಿಂಗ್ ಕೂಡಾ ನಿತೀಶ್ ನಿವಾಸಕ್ಕೆ ಭೇಟಿ ನೀಡಿದ್ದರು. ಎನ್ಡಿಎ ಕೂಟದ ಎಲ್ಲ ಪಕ್ಷಗಳಾದ ಬಿಜೆಪಿ, ಜೆಡಿಯು, ಎಲ್ಜೆಪಿ (ಆರ್ವಿ), ಎಚ್ಎಎಂ(ಎಸ್) ಮತ್ತು ಆರ್ ಎಲ್ ಎಂ ಹೊಸ ಸರಕಾರ ರಚನೆ ಮಾತುಕತೆಯನ್ನು ಶನಿವಾರವೇ ಆರಂಭಿಸಿದು, ದೆಹಲಿ ಹಾಗೂ ಪಾಟ್ನಾದಲ್ಲಿ ಪ್ರತ್ಯೇಕ ಸಭೆಗಳು ನಡೆಯುತ್ತಿವೆ.







