Bihar | ಮೂವರು ಪುತ್ರಿಯರಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ

credit: ndtv
ಮುಝಫ್ಫರ್ಪುರ,ಡಿ.16: ವ್ಯಕ್ತಿಯೋರ್ವ ತನ್ನ ಮೂವರು ಪುತ್ರಿಯರನ್ನು ನೇಣು ಬಿಗಿದು ಕೊಂದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಝಫ್ಫರ್ಪುರ ಜಿಲ್ಲೆಯ ಮಿಸ್ರೌಲಿಯಾ ಗ್ರಾಮದಲ್ಲಿ ನಡೆದಿದೆ. ಅಮರನಾಥ್ ರಾಮ್ ತನ್ನ ಎಲ್ಲ ಐವರು ಮಕ್ಕಳಿಗೆ ನೇಣು ಹಾಕಲು ಯತ್ನಿಸಿದ್ದನಾದರೂ ಇಬ್ಬರು ಪುತ್ರರು ಸಾವಿನ ಕುಣಿಕೆಯಿಂದ ಪಾರಾಗಿದ್ದಾರೆ ಎಂದು ಪೋಲಿಸರು ತಿಳಿಸಿದರು.
ಅಮರನಾಥ್ ನ ಪತ್ನಿ ವರ್ಷದ ಹಿಂದೆ ಮೃತಪಟ್ಟಿದ್ದು,ಆತ ಪುತ್ರಿಯರಾದ ಅನುರಾಧಾ(12),ಶಿವಾನಿ(7) ಮತ್ತು ರಾಧಿಕಾ(6) ಹಾಗೂ ಪುತ್ರರಾದ ಶಿವಂ(6) ಮತ್ತು ಚಂದನ್ (5) ಅವರೊಂದಿಗೆ ವಾಸವಿದ್ದ.
ಈ ದುರಂತ ಘಟನೆಗೆ ಹಲವಾರು ಕಾರಣಗಳು ಕೇಳಿ ಬರುತ್ತಿವೆ. ಆದರೆ ಪೋಲಿಸರು ಯಾವುದನ್ನೂ ದೃಢಪಡಿಸಿಲ್ಲ.
ಪತ್ನಿಯ ನಿಧನದ ಬಳಿಕ ಐವರು ಮಕ್ಕಳನ್ನು ನೋಡಿಕೊಳ್ಳುವುದು ಅಮರನಾಥಗೆ ಕಷ್ಟವಾಗಿತ್ತು ಎಂದು ಕೆಲವು ಸ್ಥಳೀಯರು ಹೇಳಿದರೆ, ಆತ ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲವನ್ನು ಪಡೆದಿದ್ದ ಮತ್ತು ಅದನ್ನು ಮರುಪಾವತಿಸುವ ಒತ್ತಡದಲ್ಲಿದ್ದ ಎಂದು ಇತರರು ತಿಳಿಸಿದರು.
ಅಡಿಗೆ ಮನೆಯಲ್ಲಿ ಮೊಟ್ಟೆಯ ಸಿಪ್ಪೆಗಳು ಬಿದ್ದುಕೊಂಡಿದ್ದು, ದುರಂತ ಅಂತ್ಯಕ್ಕೆ ಮುನ್ನ ಅಮರನಾಥ್ ಮೊಟ್ಟೆಗಳನ್ನು ಬೇಯಿಸಿ ಮಕ್ಕಳಿಗೆ ತಿನ್ನಿಸಿದ್ದ ಎನ್ನುವುದನ್ನು ಇದು ಸೂಚಿಸಿದೆ.
ಅಮರನಾಥ್ ತನ್ನ ಮಕ್ಕಳನ್ನು ಟ್ರಂಕ್ ವೊಂದರ ಮೇಲೆ ನಿಲ್ಲಿಸಿದ್ದ ಮತ್ತು ಸೀರೆಗಳಿಂದ ಮಾಡಿಕೊಂಡಿದ್ದ ಕುಣಿಕೆಗಳನ್ನು ಕುತ್ತಿಗೆ ಸುತ್ತ ಹಾಕಿಕೊಳ್ಳುವಂತೆ ಸೂಚಿಸಿದ್ದ. ಈ ಸೀರೆಗಳು ಮಕ್ಕಳ ಮೃತ ತಾಯಿಯದ್ದಾಗಿದ್ದವು. ತಾನೂ ಕುತ್ತಿಗೆಗೆ ಕುಣಿಕೆಯನ್ನು ಬಿಗಿದುಕೊಂಡಿದ್ದ ಆತ ಬಳಿಕ ಮಕ್ಕಳಿಗೆ ಟ್ರಂಕ್ ನಿಂದ ಕೆಳಕ್ಕೆ ಜಿಗಿಯುವಂತೆ ಸೂಚಿಸಿದ್ದ ಮತ್ತು ತಾನೂ ಅದನ್ನೇ ಮಾಡಿದ್ದ. ಆದರೆ ಇಬ್ಬರು ಪುತ್ರರು ಮಾತ್ರ ಸಾವಿನ ಕುಣಿಕೆಯಿಂದ ಪಾರಾಗಿ ಬದುಕುಳಿದಿದ್ದಾರೆ ಎಂದು ಪೋಲಿಸರು ತಿಳಿಸಿದರು.







