ಕರ್ತವ್ಯದಲ್ಲಿರುವಾಗ ಯೋಧ ಮೃತಪಟ್ಟರೆ ‘ಯುದ್ಧದಲ್ಲಿ ಸಂಭವಿಸಿದ ಸಾವು’ ಎಂದು ಪರಿಗಣಿಸಲಾಗದು: ಬಿಹಾರ ಸರಕಾರ

ಸಾಂದರ್ಭಿಕ ಚಿತ್ರ | PC : PTI
ಪಾಟ್ನಾ: ಕರ್ತವ್ಯದಲ್ಲಿರುವಾಗ ಯೋಧ ಮೃತಪಟ್ಟರೆ, ಅದನ್ನು ‘ಯುದ್ಧದಲ್ಲಿ ಸಂಭವಿಸಿದ ಸಾವು’ ಎಂದು ಪರಿಗಣಿಸಲಾಗದು ಎಂದು ಬಿಹಾರ ಸರಕಾರ ಬುಧವಾರ ಸ್ಪಷ್ಟಪಡಿಸಿದೆ.
ಸಿವಾನ್ ನಿವಾಸಿಯಾಗಿದ್ದ ರಾಮ್ ಬಾಬು ಸಿಂಗ್ ಜಮ್ಮು ಹಾಗೂ ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ, ಅವರು ಗಡಿ ಭದ್ರತಾ ಪಡೆಯೊಂದಿಗೆ ಇರಲಿಲ್ಲ. ಆದುದರಿಂದ ಅವರ ಸಾವನ್ನು ‘ಯುದ್ಧದಿಂದ ಸಂಭವಿಸಿದ ಸಾವು’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.
ಈ ಹಿಂದೆ ಮುಖ್ಯಮಂತ್ರಿ ಕಚೇರಿ ರಾಮ್ ಬಾಬು ಸಿಂಗ್ ಅವರನ್ನು ‘‘ಬಿಎಸ್ಎಫ್ ಯೋಧ’’ ಎಂದು ಕರೆದಿತ್ತು. ಅಲ್ಲದೆ, ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಗಾಯಗಳಿಂದ ಕಳೆದ ವಾರ ಸಾವನ್ನಪ್ಪಿದ ರಾಮ್ ಬಾಬು ಸಿಂಗ್ ಅವರನ್ನು ‘ಹುತಾತ್ಮ’ ಎಂದು ಅದು ಕರೆದಿತ್ತು.
ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು, ‘‘ನಾವು ನಿನ್ನೆ ರಾತ್ರಿ ಸೇನೆಯಿಂದ ಪತ್ರ ಸ್ವೀಕರಿಸಿದ್ದೇವೆ. ಅದರಲ್ಲಿ ರಾಮ್ ಬಾಬು ಸಿಂಗ್ ಸೇನೆಯಲ್ಲಿದ್ದ ಎಂದು ತಿಳಿಸಲಾಗಿದೆ. ಅಲ್ಲದೆ, ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದರಿಂದ ಅವರ ಸಾವನ್ನ ಯುದ್ಧದಿಂದ ಸಂಭವಿಸಿದ ಸಾವು ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿದೆ’’ ಎಂದಿದ್ದಾರೆ.
ರಾಮ್ ಬಾಬು ಸಿಂಗ್ ಅವರ ಮೃತದೇಹ ಬುಧವಾರ ಬೆಳಗ್ಗೆ ಪಾಟ್ನಾ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಅಲ್ಲಿ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ಆದರೆ, ಹುತಾತ್ಮ ಯೋಧರಿಗೆ ನೀಡುವ ಗೌರವ ರಕ್ಷೆ ನೀಡಿಲ್ಲ.
ವಿಮಾನ ನಿಲ್ದಾಣದಲ್ಲಿ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಉಪಸ್ಥಿತರಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘‘ನಿನ್ನೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎಕ್ಸ್ನ ಪೋಸ್ಟ್ನಲ್ಲಿ ರಾಮ್ ಬಾಬು ಸಿಂಗ್ ಬಿಎಸ್ಎಫ್ ಯೋಧ ಎಂದು ಹೇಳಿದ್ದರು. ಈಗ ಅವರು ಸೇನೆಯಲ್ಲಿದ್ದರು ಎಂದು ತಿಳಿದು ಬಂದಿದೆ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಅವರ ಈ ಗೊಂದಲ ವಿಷಾದಕರ. ಆದರೂ ಸಿಂಗ್ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಅವರು ಈಡೇರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ’’ ಎಂದಿದ್ದಾರೆ.